ಬದಿಯಡ್ಕ: ಕಾಸರಗೋಡು ಜಿಲ್ಲೆಯ ಅಭಿವೃದ್ಧಿಯ ಮೈಲುಗಲ್ಲಾಗಿ 2013 ರಲ್ಲಿ ಕಾಸರಗೋಡು ವೈದ್ಯಕೀಯ ಕಾಲೇಜಿಗೆ ಶಿಲಾನ್ಯಾಸಗೈದು ಇದೀಗ ಆರು ವರ್ಷಗಳಾದರೂ, ಕಾಮಗಾರಿ ಪೂರ್ಣಗೊಳಿಸಿ ಜನೋಪಯೋಗಕ್ಕೆ ಬಳಸಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ. ವೈದ್ಯಕೀಯ ಕಾಲೇಜಿನ ನಿರ್ಮಾಣವನ್ನು ತ್ವರಿತಗತಿಯಲ್ಲಿ ಮುಂದುವರಿಸುವಂತೆ ಆಗ್ರಹಿಸಿ ಜನಪರ ಹೋರಾಟ ಸಮಿತಿಯು ಶನಿವಾರ ಗಮನ ಸೆಳೆಯುವ ತೆವಳಿ ಮುಷ್ಕರ ನಡೆಸಿ ಗಮನ ಸೆಳೆದು ಅಧಿರ್ಕರತರ ಕಣ್ತೆರೆಸಲು ಯತ್ನಿಸಿತು.
ಶೈಕ್ಷಣಿಕ ಕಟ್ಟಡದ ಕಾಮಗಾರಿ ಪೂರ್ತಿಗೊಂಡರೂ ವೈದ್ಯಕೀಯ ಕಟ್ಟಡದ ಕೆಲಸವು ಆಮೆ ನಡಿಗೆಯಲ್ಲಿ ಸಾಗುತ್ತಿದೆ. ವೈದ್ಯಕೀಯ ಕಾಲೇಜಿನ ನೌಕರರ ಕ್ವಾರ್ಟರ್ಸ್, ಹಾಸ್ಟೆಲ್, ಲೈಬ್ರರಿ, ಸಭಾಂಗಣ, ತ್ಯಾಜ್ಯ ವಿಲೇವಾರಿ, ವಿದ್ಯುತ್ ಇತ್ಯಾದಿಗಳಿಗೆ ಆಡಳಿತಾತ್ಮಕ ಅನುಮತಿ ಈವರೆಗೆ ಲಭಿಸಿಲ್ಲ. ಅಂದಾಜು 135 ಕೋಟಿ ರೂ ನಿರ್ಮಾಣವನ್ನು ಕಿಟ್ಕೊ ಸಂಸ್ಥೆ ಸರ್ಕಾರಕ್ಕೆ ಸಲ್ಲಿಸಿದೆ. ಇದಕ್ಕೆ ಆವಶ್ಯಕವಾದ ಮೊತ್ತವನ್ನು ಪಡೆದು ಕೆಲಸವನ್ನು ಆದಷ್ಟು ಬೇಗನೆ ಪ್ರಾರಂಭಿಸುವಂತೆ ಕ್ರಿಯಾ ಸಮಿತಿ ಆಗ್ರಹ ಮುಂದಿರಿಸಿದೆ.
ಮುಷ್ಕರದಲ್ಲಿ ಬದಿಯಡ್ಕ ಗ್ರಾ.ಪಂ. ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ತೆವಳುವ ಮುಷ್ಕರವನ್ನು ಉದ್ಘಾಟಿಸಿದರು. ಸಮರ ಸಮಿತಿ ಅಧ್ಯಕ್ಷ ಮಾಹಿನ್ ಕೇಳೋಟ್ ಅಧ್ಯಕ್ಷತೆ ವಹಿಸಿದ್ದರು. ಸೋಮಶೇಖರ ಜೆ.ಎಸ್., ಚಂದ್ರಶೇಖರ ರಾವ್ ಕಲ್ಲಗ, ಅನ್ವರ್ ಓಝೋನ್, ಎಸ್.ಎನ್.ಮಯ್ಯ, ಎ.ಎಸ್.ಅಹ್ಮದ್, ಬಿ.ಎಸ್.ಗಾಂಭೀರ್, ಎಂ.ಕೆ. ರಾಧಾಕೃಷ್ಣನ್, ಆಯಿಷ ಪೆರ್ಲ, ಸಿದ್ದೀಕ್ ಒಳಮೊಗರು, ಕುಂಜಾರ್ ಮುಹಮ್ಮದ್, ಅಜೇಯನ್ ಪರವನಡ್ಕ, ವಾರಿಜಾಕ್ಷನ್, ಜೀವನ್ ತೋಮಸ್, ಅಬ್ದುಲ್ ನಾಸಿರ್, ಪೆÇ್ರ. ಎ.ಶ್ರೀನಾಥ್, ಅಬ್ದುಲ್ಲ ಚಾಲಕ್ಕರ, ಫಾರೂಕ್ ಖಾಸಿಮಿ, ಜೋಸ್ ಜೋಸಫ್, ತಿರುಪತಿ ಕುಮಾರ್ ಭಟ್, ಶಾಫಿ ಹಾಜಿ ಆದೂರು, ಮೊಯ್ದೀನ್ ಕುಟ್ಟಿ ಮೊದಲಾದವರು ಉಪಸ್ಥಿತರಿದ್ದು ಮಾತನಾಡಿದರು.
ಕ್ರಿಯಾ ಸಮಿತಿಯ ನಿರಂತರತೆ:
2013ರಲ್ಲಿ ಶಿಲಾನ್ಯಾಸಗೈದ ಬಳಿಕ ವೈದ್ಯಕೀಯ ಕಾಲೇಜು-ಆಸ್ಪತ್ರೆಯ ಕಾಮಗಾರಿ ಸುಮಾರು ಒಂದೂವರೆ ವರ್ಷಗಳಷ್ಟು ಕಾಲ ಸಂಪೂರ್ಣ ನೆನೆಗುದಿಗೆ ಬಿದ್ದಿತ್ತು. ಆ ಸಂದರ್ಭ ಹುಟ್ಟುಪಡೆದ ಕ್ರಿಯಾ ಸಮಿತಿ ವಿವಿಧ ಹೋರಾಟ ಉಪಕ್ರಮಗಳ ಮೂಲಕ ಕಾಮಗಾರಿ ಆರಂಭಕ್ಕೆ ತೀವ್ರ ಮುಂಚೂಣಿಯಲ್ಲಿ ಕಾರ್ಯವೆಸಗಿತು. ಬಳಿಕ ಕಾಮಗಾರಿಯ ಒಂದು ಹಂತದಲ್ಲಿ ಸ್ಥಗಿತಗೊಂಡಂತೆ ಎಂದೆನಿಸಿದಾಗ ತಿರುವನಂತಪುರದ ಸೆಕ್ರೆಟರಿಯೇಟ್ ಮುಂದೆ ಅಳುವ ಸಮರದ ಮೂಲಕ(ಪ್ರತಿಭಟನ ಕಾರರು ಜೋರಾಗಿ ಒಂದು ಗಂಟೆಗಳಷ್ಟು ಹೊತ್ತು ಅತ್ತದ್ದು) ಗಮನ ಸೆಳೆದಿತ್ತು. ಬಳಿಕ ಉಕ್ಕಿನಡ್ಕದಲ್ಲಿ ಹಲವು ಬಾರಿ ಪ್ರತಿಭಟನೆ, ಹೋರಾಟವನ್ನು ನಡೆಸಿತ್ತು.