ನವದೆಹಲಿ: ದೇಶದಲ್ಲಿರುವ 130 ಕೋಟಿ ಭಾರತೀಯರೆಲ್ಲಾ ಹಿಂದೂಗಳೇ ಎಂಬ ಮೋಹನ್ ಭಾಗವತ್ ಹೇಳಿಕೆ ಹಿನ್ನೆಲೆಯಲ್ಲಿ ಮೋದಿ ಸರ್ಕಾರದ ವಿರುದ್ಧ ಎನ್'ಡಿಎ ಮೈತ್ರಿಕೂಟ ಅಸಮಾಧಾನ ಹೊರಹಾಕುತ್ತಿವೆ.
ಬಿಜೆಪಿ ಹಾಗೂ ಆರ್'ಎಸ್ ಎಸ್ ಹಿಂದುತ್ವ ಅಜೆಂಡಾವನ್ನು ಹೇರಲು ಯತ್ನಿಸುತ್ತಿದೆ ಎಂದು ಹೇಳುತ್ತಿರುವ ಎನ್'ಡಿಎ ಮೈತ್ರಿಕೂಟದಲ್ಲಿ ಸೇರ್ಪಡೆಗೊಂಡಿರುವ ಲೋಕ ಜನಶಕ್ತಿ ಪಕ್ಷ (ಎಲ್'ಜೆಪಿ) ಹಾಗೂ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಆರ್'ಪಿಐ) ಪಕ್ಷಗಳು ಅಸಮಾಧಾನ ಹೊರ ಹಾಕಿದೆ.
ಭಾಗವತ್ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಹಾಗೂ ಆರ್'ಪಿಐ ನಾಯಕ ರಾಮದಾಸ್ ಅಥಾವಳೆಯವರು, ಎಲ್ಲಾ ಭಾರತೀಯರೂ ಹಿಂದೂಗಳು ಎಂಬ ಹೇಳಿಕೆ ಸರಿಯಲ್ಲ. ದೇಶದಲ್ಲಿರುವ ಎಲ್ಲರೂ ಬೌದ್ಧ ಧರ್ಮಕ್ಕೆ ಸೇರ್ಪಡೆಗೊಂಡಿದ್ದ ಒಂದು ಕಾಲ ಕೂಡ ಈ ಹಿಂದೆ ಇತ್ತು. ದೇಶದಲ್ಲಿರೂವ ಎಲ್ಲರೂ ಭಾರತೀಯರೇ ಎಂದು ಭಾಗವತ್ ಹೇಳಿದ್ದರೆ, ಅದನ್ನು ನಾವು ಒಪ್ಪಿಕೊಳ್ಳುತ್ತೇವೆ. ದೇಶದಲ್ಲಿ ಸಿಕ್ಖರು, ಹಿಂದೂಗಳು, ಬೌದ್ಧರು, ಕ್ರಿಶ್ಚಿಯನ್ನರು, ಪಾಸ್ರಿ, ಜೈನ್, ಲಿಂಗಾಯತ ಸಮುದಾಯಗಳ ಜನರು ಜೀವಿಸುತ್ತಿದ್ದಾರೆಂದು ಹೇಳಿದ್ದಾರೆ. ಭಾರತದಲ್ಲಿರುವ ಎಲ್ಲಾ ಜನರು ಹಲವು ಜಾತಿಗಳು ಹಾಗೂ ನಂಬಿಕೆಗಳಿಂದ ಜೀವನ ನಡೆಸುತ್ತಿದ್ದಾರೆ. ಭಾರತದಲ್ಲಿರುವವರು ಭಾರತೀಯರು. ರಾಷ್ಟ್ರದ ಸಂವಿಧಾನ ಜಾತ್ಯಾತೀತವಾಗಿದೆ. ಇದು ನಮ್ಮ ಸಂವಿಧಾನ ನಮಗೆ ಕೊಟ್ಟಿರುವ ದೊಡ್ಡ ಉಡುಗೊರೆ. ಯಾವುದೇ ಧರ್ಮ ಹಾಗೂ ಸಂಪ್ರದಾಯದ ಬಗ್ಗೆ ನಾವು ನಂಬಿಕೆ ಇಡಬಹುದಾಗಿದೆ ಎಂದು ತಿಳಿಸಿದ್ದಾರೆ.
ಈ ಹಿಂದೆ ಕೇಂದ್ರ ಸರ್ಕಾರ ಪೌರತ್ವ ಕಾಯ್ದೆ ಹಾಗೂ ಎನ್ ಆರ್ 'ಸಿಯನ್ನು ಜೆಡಿಯು ಹಾಗೂ ಅಕಾಲಿ ದಳ ವಿರೋಧಿಸಿತ್ತು. ಈ ಮೂಲಕ ಎನ್'ಡಿಎ ಮೈತ್ರಿಕೂಟದ ವಿರುದ್ದ ಅಸಮಾಧಾನ ಹೊರಹಾಕಿದ್ದು, ಇದೀಗ ಭಾಗವತ್ ಹೇಳಿಕೆಯಿಂದಾಗಿ ಮತ್ತೆರಡು ಪಕ್ಷ ಎನ್'ಡಿಎ ವಿರುದ್ಧ ಅಸಮಾಧಾ ವ್ಯಕ್ತಪಡಿಸಿದೆ.