ಉಪ್ಪಳ: ಯಕ್ಷಗಾನಕ್ಕಾಗಿ ಜೀವತೇದ ಹಿರಿಯರನ್ನು ನಾವು ಮರೆಯದಿರೋಣ, ಹಿರಿಯರ ಶ್ರಮದಿಂದ ಇಂದೂ ಯಕ್ಷಗಾನ ಕಲೆ ಶ್ರೀಮಂತವಾಗಿ ಉಳಿದಿದೆ. ಶ್ರದ್ಧೆ ಹಾಗೂ ಭಕ್ತಿ, ಸಾಧನೆ ಮತ್ತು ಸೇವಾ ಮನೋಭಾವದಿಂದ ನಾವು ತೊಡಗಿಸಿಕೊಂಡಾಗ ಕಲೆಯಲ್ಲಿ ನಾವು ಉನ್ನತಿಗೆ ಏರುವುದಕ್ಕೆ ಸಾಧ್ಯ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಯೋಗೀಶ ರಾವ್ ಚಿಗುರುಪಾದೆ ಅಭಿಪ್ರಾಯಪಟ್ಟರು.
ಬೇಕೂರು ಅಗರ್ತಿಮೂಲೆಯ ಅಯ್ಯಪ್ಪ ಭಜನಾ ಮಂದಿರದಲ್ಲಿ ನಾಟ್ಯ ಗುರು ರಾಮ ಸಾಲಿಯಾನ್ ಮಂಗಲ್ಪಾಡಿ ನಡೆಸುವ ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಾಯೋಜಕತ್ವದ ಉಚಿತ ಯಕ್ಷಗಾನ ತರಬೇತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯಕ್ಷಗಾನ ಅಕಾಡೆಮಿಯು ಆಯ್ದ ಕೇಂದ್ರಗಳಿಗೆ ಲಭ್ಯ ಅನುದಾನದ ಮೇರೆಗೆ ಉಚಿತ ತರಬೇತಿಗೆ ಅನುದಾನ ನೀಡಿ ಪ್ರೋತ್ಸಾಹಿಸುತ್ತದೆ. ಅದನ್ನು ಸದುಪಯೋಗ ಪಡಿಸಬೇಕಾಗಿದೆ. ನಾವು ಎಷ್ಟುದಿನ ಬದುಕಿದ್ದೇವೆ ಎನ್ನುವುದಕ್ಕಿಂತಲೂ ನಾವು ಬದುಕಿರುವಾಗ ನಮ್ಮ ಸಂಸ್ಕøತಿ, ಕಲೆಯ ಉಳಿವಿಗೆ ನಾವೇನು ಕಾಣ್ಕೆ ನೀಡಿದ್ದೇವೆ ಎನ್ನುವುದು ಮುಖ್ಯವಾಗುತ್ತದೆ. ಯಕ್ಷಗಾನ ತರಗತಿಯ ಸದುಪಯೋಗ ಪಡೆದು ಉತ್ತಮ ಕಲಾವಿದರಾಗಿ ಮುಂದಿನ ಪೀಳಿಗೆಗೆ ನಮ್ಮದೇ ಕೊಡುಗೆ ನೀಡೋಣ ಎಂದು ಹೇಳಿದರು.
ಗೋಪಾಲ ಕೆ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಐಲ ಶ್ರೀ ಶಾರದಾ ಶಾಲೆಯ ಶಿಕ್ಷಕ ಕೆ.ಪಿ.ನಾಭ.ಐಲ ಮಾತನಾಡಿ ಯಕ್ಷಗಾನದಿಂದ ನಮ್ಮ ಜ್ಞಾನ, ಭಾಷೆ, ಸಂಸ್ಕøತಿ ಬೆಳೆಯಲು ಸಾಧ್ಯ ಎಂದರು. ಸಭೆಯಲ್ಲಿ ಪ್ರಸಂಗಕರ್ತ ಪದ್ಮನಾಭ ಮೂಡಬಿದ್ರೆ, ನಾರಾಯಣ ಜ್ಯೋತಿಷಿ ಕುಡಾಲು ಮೇರ್ಕಳ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಯಕ್ಷಪ್ರತಾಪ, ಯಕ್ಷಕಲಾಸಾರಥಿ ಬಿರುದಾಂಕಿತ ನಾಟ್ಯ ಗುರುಗಳಾದ ರಾಮ ಸಾಲಿಯಾನ್ ಮಂಗಲ್ಪಾಡಿ ಮಾತನಾಡಿ ಯಕ್ಷಗಾನವು ನಾಟ್ಯ, ಅಭಿನಯ, ವಾಚ್ಯಗಳನ್ನು ಒಳಗೊಂಡ ಸಮಷ್ಟಿ ಕಲೆ. ಸಾಧನೆ ಶ್ರದ್ಧೆಗಳಿಂದ ಕಲೆಯನ್ನು ಕಲಿತು ಯಶಸ್ಸನ್ನು ಗಳಿಸಬಹುದು ಎಂದರು.
ಬಾಲಕೃಷ್ಣ ಕನ್ನಟಿಪಾರೆ ಪ್ರಾರ್ಥನೆ ಹಾಡಿದರು. ದಿವಾಕರ ಪ್ರತಾಪನಗರ ನಿರೂಪಿಸಿ ಶಿಕ್ಷಕ ಬರಹಗಾರ ದೈವನರ್ತಕ ಸುಜಿತ್ ಕುಮಾರ್ ಸ್ವಾಗತಿಸಿ ವಂದಿಸಿದರು.