ಬದಿಯಡ್ಕ: ಕರಾಡ ಕಲಾ ಸಾಹಿತ್ಯ ಪ್ರತಿಷ್ಠಾನ ಪೆರ್ಲ ಇದರ 18ನೇ ಕರಾಡವಾಣಿ ವಿಶೇಷಾಂಕ ಬಿಡುಗಡೆ ಕಾರ್ಯಕ್ರಮ ಕಾರ್ಕಳ ತೆಳ್ಳಾರ್ ಉಪ್ಪಂಗಳ ಕೃಷ್ಣ ಭಟ್ ಅವರ ಮನೆ ಬಲಾಜೆಯಲ್ಲಿ ಇತ್ತೀಚೆಗೆ ಜರಗಿತು.
ಅಗಲ್ಪಾಡಿ ಶ್ರೀ ಅನ್ನಪೂರ್ಣೇಶ್ವರಿ ದೇವಳದ ಮೊಕ್ತೇಸರ ವಾಸುದೇವ ಭಟ್ ದೀಪ ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಪ್ರತಿಷ್ಠಾನದ ಅಧ್ಯಕ್ಷ ವೆಂಕಟಸುಬ್ಬ ರಾವ್ ಅಧ್ಯಕ್ಷತೆ ವಹಿಸಿದರು. ಉಡುಪಿ ಕಾಲೇಜು ಉಪನ್ಯಾಸಕಿ ಪ್ರಫುಲ್ಲಾ ಕುಂಡೇಲು ವಿಶೇಷಾಂಕ ಬಿಡುಗಡೆಗೊಳಿಸಿ ಮಾತನಾಡಿ, ಕರಾಡವಾಣಿ ಪತ್ರಿಕೆ ಸಮಾಜದ ಯುವ ಬರಹಗಾರರ ಸಾಹಿತ್ಯ ಸೃಷ್ಟಿಗೆ ಮೆಟ್ಟಿಲಾಗಬಲ್ಲ ಉತ್ತಮ ವೇದಿಕೆಯಾಗಿದೆ. ಬರಹಗಳು ಸಮಾಜದ ಕೈಗನ್ನಡಿಯಾಗಬೇಕು. ಸಮಾಜಮುಖಿ ಸಾಹಿತ್ಯ ಸೃಷ್ಠಿಗೆ ಒತ್ತು ನೀಡುವ ಮೂಲಕ ಸಂಬಂಧಗಳನ್ನು ಬೆಸೆಯುವ ಕೆಲಸ ನಡೆಯಬೇಕು ಎಂದರು.
ಶ್ರೀವತ್ಸ ಕೋಟೆ ಅತಿಥಿಗಳನ್ನು ಪರಿಚಸಿದರು. ಗಿರಿಧರ ಭಟ್ ಮಾತನಾಡಿ, ವಿವಾಹ ವಿಚ್ಚೇದನ ಪ್ರಕರಣಗಳು ಆತಂಕಕಾರಿ ಬೆಳವಣಿಗೆಯಾಗಿದೆ. ಈ ರೀತಿಯ ಪ್ರಕರಣಗಳು ಕುಟುಂಬ ಮೌಲ್ಯವನ್ನು ಕುಂಠಿತ ಗೊಳಿಸುತ್ತಿದ್ದು ಈ ನಿಟ್ಟಿನಲ್ಲಿ ಚಿಂತನೆ ನಡೆಸಬೇಕು. ಯುವ ಪೀಳಿಗೆಗೆ ಉತ್ತಮ ಮಾರ್ಗದರ್ಶನ ನೀಡುವ ಕೆಲಸ ನಡೆಯಬೇಕು.ಪತ್ರಿಕೆ ಆ ನಿಟ್ಟಿನಲ್ಲಿ ಕೆಲಸ ಮಾಡಲಿ ಎಂದರು.
ಕರಾಡವಾಣಿ ಮಾಸ ಪತ್ರಿಕೆ ವ್ಯವಸ್ಥಾಪಕ ಸಂಪಾದಕ ಪಿಲಿಂಗಲ್ಲು ಕೃಷ್ಣ ಭಟ್, ಪ್ರಧಾನ ಸಂಪಾದಕಿ ಅರುಣಾ ಶಿವರಾಂ ಪಡ್ಪು ಮಾತನಾಡಿದರು. ದಿ.ರಾಮಭಟ್ ಬದಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಕೋಟೆ ರಾಮ ಭಟ್ ನುಡಿ ನಮನ ಸಲ್ಲಿಸಿದರು. ಉಪ ಸಂಪಾದಕಿ ನಳಿನಿ ಸೈಪಂಗಲ್ಲು ಕಥೆ, ಕವನ, ನಗೆ ಬರಹ ಸ್ಪರ್ಧೆಗಳ ಬಹುಮಾನಗಳ ಮಾಹಿತಿ ನೀಡಿದರು. ಪಿ.ಸುಬ್ರಹ್ಮಣ್ಯ ಭಟ್ ಪರಾಡ್ಕರ್ ಬಹುಮಾನ ವಿತರಿಸಿದರು. ಕೆ. ಗಣಪತಿ ಭಟ್ ಅವರು ದೇವ್ ಜಿ ಗೌರು-ಮಾಧವ ಶಿಕ್ಷಣ ನಿಧಿಯಿಂದ ಧನ ಸಹಾಯ ಹಾಗೂ ಶೈಕ್ಷಣಿಕ ದತ್ತು ಸ್ವೀಕಾರದ ಧನ ಸಹಾಯ ವಿತರಿಸಿದರು. ಸೃಷ್ಟಿ ಮತ್ತು ನಿರೀಕ್ಷ ಪ್ರಾರ್ಥಿಸಿದರು. ಕೃಷ್ಣ ಭಟ್ ಸ್ವಾಗತಿಸಿ, ಜಯಶ್ರೀ ಮೈಕಾನ ವಂದಿಸಿದರು. ಸುರೇಶ್ ಶಿರಂತಡ್ಕ ನಿರ್ವಹಿಸಿದರು.
ಶಾರದಾ ಬಿ.ಭಟ್ ಇಲ್ಲಿಬೆಟ್ಟು, ಶ್ರೀನಿವಾಸ ಭಟ್ ಉಪ್ಪಂಗಳ ಬಲಾಜೆ, ಶ್ರೀರಂಜಿನಿ, ಅದ್ವೈತ ಶರ್ಮ, ಪ್ರಮೋದ್ ಜಾಕಿಬೆಟ್ಟು ಅವರ ಹಾಡುಗಾರಿಕೆ, ರಾಜಶ್ರೀ ಪರಾಡ್ಕರ್ ಎರ್ಪಲೆ, ಆದ್ಯ ಶೆಟ್ಟಿಬೆಟ್ಟು-ಪಡ್ರೆ, ಸೃಷ್ಠಿ ಶರ್ಮ, ನಿರೀಕ್ಷಾ ಇಲ್ಲಿಬೆಟ್ಟು, ಯಜ್ಞಿಕಾ ಕಾರ್ಕಳ ಅವರ ನೃತ್ಯ, ಶಾರದಾ ಬಿ.ಭಟ್, ಕೌಸ್ತುಭ, ಪ್ರದ್ಯುಮ್ನ ಮಂಗಲ್ಪಾದೆ ಅವರ ವೀಣಾವಾದನ, ಸುಮಂತ್ ಕುಂಡೇಲು ಅವರ ಕೊಳಲುವಾದನ ಮತ್ತಿತರ ವಿನೋದಾವಳಿ ಕಾರ್ಯಕ್ರಮಗಳು ನಡೆದವು.