ನವದೆಹಲಿ: ಬಾಂಗ್ಲಾದೇಶ, ಪಾಕಿಸ್ತಾನ, ಅಪ್ಘಾನಿಸ್ತಾನ ದೇಶಗಳ ಮುಸ್ಲಿಂ ಅಕ್ರಮ ವಲಸಿಗರಿಗೆ ಭಾರತ ಪ್ರವೇಶ ನಿರಾಕರಿಸುವ ಪೌರತ್ವ ಮಸೂದೆಗೆ ರಾಷ್ಟ್ರಪತಿಗಳ ಅಂಗೀಕಾರವಾಗಿದೆ. ಆದರೆ ಕಾಯ್ದೆಯನ್ನು ಕೆಲವು ರಾಜ್ಯಗಳು ವಿರೋಧಿಸುತ್ತಿವೆ. ಪಶ್ಚಿಮ ಬಂಗಾಳ, ಪಂಜಾಬ್, ಕೇರಳ, ಮಧ್ಯಪ್ರದೇಶ, ಚತ್ತೀಸ್‍ಘಡ ಸೇರಿ ಇನ್ನೂ ಕೆಲವು ರಾಜ್ಯಗಳು ಪೌರತ್ವ ಕಾಯ್ದೆಯನ್ನು ವಿರೋಧಿಸುತ್ತಿವೆ. ಮಮತಾ ಬ್ಯಾನರ್ಜಿ ಅವರಂತೂ 'ನನ್ನ ರಾಜ್ಯದ ಒಬ್ಬ ವ್ಯಕ್ತಿಯನ್ನಾದರೂ ಮುಟ್ಟಿ ನೋಡಿ' ಎಂದು ಕೇಂದ್ರಕ್ಕೆ ಸವಾಲು ಎಸೆದಿದ್ದಾರೆ.
ಯಾವುದೇ ರಾಜ್ಯಗಳು ಕಾಯ್ದೆಯನ್ನು ತಿರಸ್ಕರಿಸುವಂತಿಲ್ಲ ಹಾಗೂ ತಿದ್ದುಪಡಿ ಮಾಡುವಂತಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ಕಾಯ್ದೆಯು ಕೇಂದ್ರದ ಏಳನೇ ಶೆಡ್ಯೂಲ್ ಅಡಿಯಲ್ಲಿ ಸೇರ್ಪಡೆ ಆಗಿರುವ ಕಾರಣ ಇದನ್ನು ಬದಲಾಯಿಸುವ ಅಥವಾ ನಿರಾಕರಿಸುವ ಹಕ್ಕು ರಾಜ್ಯ ಸರ್ಕಾರಗಳಿಗಿಲ್ಲ ಎಂದು ಕೇಂದ್ರ ಹೇಳಿದೆ.
ಏಳವೇ ಶೆಡ್ಯೂಲ್‍ನಲ್ಲಿ ಭದ್ರತೆ, ವಿದೇಶಾಂಗ ವ್ಯವಹಾರ, ರೈಲ್ವೆ, ನಾಗರೀಕತೆ, ರಾಷ್ಟ್ರೀಯತೆ ಪ್ರಧಾನ ಅಂಶಗಳು ಇದ್ದು, ಇವು ಕೇಂದ್ರದ ಅಡಿಯಲ್ಲಿವೆ ಇವು ರಾಜ್ಯಗಳ ಅಧೀನದಲ್ಲಿಲ್ಲ ಎಂದು ಕೇಂದ್ರ ಗೃಹ ಸಚಿವಾಲಯ ಶುಕ್ರವಾರ ಸ್ಪಷ್ಟಪಡಿಸಿದೆ.
ಪಶ್ಚಿಮ ಬಂಗಾಳ, ಪಂಜಾಬ್, ಚತ್ತೀಸ್‍ಗಡ, ಕೇರಳ, ಮಧ್ಯಪ್ರದೇಶ ಇನ್ನೂ ಕೆಲವು ರಾಜ್ಯಗಳು ಪೌರತ್ವ ಕಾಯ್ದೆಯನ್ನು ಅಸಾಂವಿಧಾನಿಕ ಎಂದು ಟೀಕಿಸಿದ್ದು, ಕಾಯ್ದೆಗೆ ವಿರೋಧ ವ್ಯಕ್ತಪಡಿಸಿದ್ದವು.