ಮುಳ್ಳೇರಿಯ: ನೂತನವಾಗಿ ಅಸ್ತಿತ್ವಕ್ಕೆ ಬಂದ ಬೆಳ್ಳೂರು ಗೋಳಿಕಟ್ಟೆಯ ಓಂಶ್ರೀ ಕಲಾಕ್ಷೇತ್ರದ ನೇತೃತ್ವದಲ್ಲಿ ತೆಂಕುತಿಟ್ಟಿನ ನುರಿತ ಹಿಮ್ಮೇಳ ಕಲಾವಿದ ಮತ್ತು ಗುರು ರಾಘವ ಬಲ್ಲಾಳ್ ಕಾರಡ್ಕ ಅವರಿಗೆ ಬೆಳ್ಳೂರು ಶ್ರೀ ಮಹಾವಿಷ್ಣು ಕ್ಷೇತ್ರದಲ್ಲಿ ಇತ್ತೀಚೆಗೆ ಆಯೋಜಿಸಿದ ಸಮಾರಂಭದಲ್ಲಿ 'ಯಕ್ಷರತ್ನ' ಪ್ರಶಸ್ತಿಯನ್ನಿತ್ತು ಅಭಿನಂದಿಸಲಾಯಿತು. ಇದೇ ಸಂದರ್ಭದಲ್ಲಿ ರಾಘವ ಬಲ್ಲಾಳರಿಂದ ವಿವಿದೆಡೆ ಹಿಮ್ಮೇಳ ಶಿಕ್ಷಣ ಪಡೆದ 28 ವಿದ್ಯಾರ್ಥಿಗಳ ಪೈಕಿ 14ಮಂದಿ ಚೆಂಡೆ, ಮದ್ದಳೆ, ಭಾಗವತಿಕೆ ವಿದ್ಯಾರ್ಥಿಗಳ ಶಾಸ್ತ್ರೋಕ್ತ ರಂಗಪ್ರವೇಶ ನಡೆದು, ಜನಗಮನ ಸೆಳೆದು ಮೆಚ್ಚುಗೆಗೆ ಪಾತ್ರವಾಯಿತು.
ಸಮಾರಂಭವನ್ನು ಬ್ರಹ್ಮಶ್ರೀ ಉಳಿಯ ವಿಷ್ಣು ಅಸ್ರ ದೀಪಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು "ಹೊಸ ಪೀಳಿಗೆ ಯಕ್ಷಗಾನ ಕ್ಷೇತ್ರಕ್ಕೆ ಆಕರ್ಷಿತರಾಗುವುದರಿಂದ ಅಭಿಮಾನ ಮೂಡುತ್ತಿದೆ. ಎಳೆಯರನ್ನು ತಯಾರಿಸುವಲ್ಲಿ ಹಿರಿಯರು ತೋರುವ ಕಾಳಜಿ ಪ್ರಶಂಸನೀಯ" ಎಂದವರು ನುಡಿದರು.
ಸಾಹಿತಿ ಗೋಪಾಲಕೃಷ್ಣ ಭಟ್ ಗೋಳಿತ್ತಡ್ಕ ಅಧ್ಯಕ್ಷತೆ ವಹಿಸಿದ್ದರು. ಉಪಜಿಲ್ಲಾ ಶಿಕ್ಷಣಾಧಿಕಾರಿ ಯತೀಶ್ ಕುಮಾರ್ ರೈ ಮುಳ್ಳೇರಿಯ ಅವರು ರಾಘವ ಬಲ್ಲಾಳರ ಕುರಿತು ಅಭಿನಂದನಾ ಭಾಷಣ ಮಾಡಿದರು. ಪಡ್ರೆ ಚಂದು ಸ್ಮಾರಕ ಯಕ್ಷಗಾನ ತರಬೇತಿ ಕೇಂದ್ರದ ಸಂಚಾಲಕ, ನಾಟ್ಯಚಾರ್ಯ ಸಬ್ಬಣಕೋಡಿ ರಾಮ ಭಟ್, ವೈದಿಕ ಉದಯಕುಮಾರ ಕುಂಜತ್ತಾಯ, ಕಣಿಪುರ ಯಕ್ಷಗಾನ ಮಾಸಪತ್ರಿಕೆ ಪ್ರಧಾನ ಸಂಪಾದಕ ಎಂ.ನಾ.ಚಂಬಲ್ತಿಮಾರ್, ಗ್ರಾ.ಪಂ. ಸದಸ್ಯ ಬಾಬು ಆನೆಕ್ಕಳ, ಕೊಡ್ಯಮೆ ಅರಮನೆಯ ಕೆ.ಶಿವರಾಮ ಬಲ್ಲಾಳ್, ಚೆಂಗಳ ದೊಡ್ಡಬೀಡು ನಾರಾಯಣ ಬಲ್ಲಾಳ್, ಅಡ್ವಳ ಬೀಡು ಬಾಲಕೃಷ್ಣ ಬಲ್ಲಾಳ್, ಚೆಂಗಳ ದೊಡ್ಡಬೀಡು ದಾಮೋದರ ಬಲ್ಲಾಳ್, ಬೆಳ್ಳೂರು ಶ್ರೀಮಹಾವಿಷ್ಣು ದೇವಳದ ಅಧ್ಯಕ್ಷ ಎ.ಬಿ. ಗಂಗಾಧರ ಬಲ್ಲಾಳ್, ಖ್ಯಾತವೈದ್ಯ ಡಾ. ಮೋಹನದಾಸ ರೈ, ಹಿರಿಯ ಕಲಾವವಿದ ವಾಮದೇವ ಪುಣಿಂಚಿತ್ತಾಯ, ದಾಮೋದರ ಪುಣಿಂಚಿತ್ತಾಯ, ಡಾ.ಎಸ್.ಎನ್ ಭಟ್ ಪೆರ್ಲ ಮೊದಲಾದವರು ಅತಿಥಿಗಳಾಗಿ ಪಾಲ್ಗೊಂಡು ಶುಭಹಾರೈಸಿದರು.
ಸಮಾರಂಭದಲ್ಲಿ ಬೆಳ್ಳೂರಿನಂತಹಾ ಗ್ರಾಮೀಣ ಪ್ರದೇಶದಲ್ಲಿ ಓಂಶ್ರೀ ಕಲಾಕ್ಷೇತ್ರ ಸ್ಥಾಪಿಸುವ ಮುಖೇನ ಯಕ್ಷಗಾನ ಸಹಿತ ಕಲಾ ಕೈಂಕರ್ಯಗಳಿಗೆ ಪ್ರೋತ್ಸಾಹ ನೀಡಲು ಮುಂದಾದ ಶಶಿಕಿರಣ ಬಲ್ಲಾಳ್ ಅವರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು. ಅಧ್ಯಾಪಕ ಹರ್ಷ ಬಲ್ಲಾಳ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಬಳಿಕ ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಟ್ಯತರಬೇತಿ ಕೇಂದ್ರದ ಮಕ್ಕಳಿಂದ "ಮದನಾಕ್ಷಿ-ತಾರಾವಳಿ, ವೀರಕುಶ-ಲವ" ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.
ತಲೆಗೆ ಪೇಟಸುತ್ತಿ ರಂಗಪ್ರವೇಶದಲ್ಲೇ ಮನಸೆಳೆದ ಮಕ್ಕಳು!:
ತೆಂಕುತಿಟ್ಟು ಯಕ್ಷಗಾನದಲ್ಲಿ ಹಿಮ್ಮೇಳಕ್ಕೆ ಶುಭ್ರಸಮವಸ್ತ್ರ ಸಹಿತ ತಲೆಗೆ ಪೇಟ ಸುತ್ತುವುದು ಸಾಂಪ್ರದಾಯಿಕ ಶಿಸ್ತಿನ ಕ್ರಮ. ಆದರೆ ಇತ್ತೀಚೆಗೆ ಅದೆಲ್ಲಾ ಪಾಲನೆಯಾಗದೇ, ಉಲ್ಲಂಘಿಸಲ್ಪಟ್ಟು ರೆಡಿಮೇಡ್ ಕಟ್ಟಿದ ಪೇಟ ಇಡುವುದು ಕೆಲವರ ಕ್ರಮ. ಆದರೆ ರಾಘವ ಬಲ್ಲಾಳರು ತಮ್ಮ ಶಿಷ್ಯರ ಮೂಲಕ ಸಾಂಪ್ರದಾಯಿಕ ಪೇಟ ಸುತ್ತುವ ಕ್ರಮವನ್ನು ಮರಳಿ ತಂದಿದ್ದಾರೆ. ಚೆಂಡೆ, ಮದ್ದಳೆ, ಭಾಗವತಿಕೆಯಲ್ಲಿ ರಂಗಪ್ರವೇಶಗೈದ 14 ಮಕ್ಕಳು ಕೂಡಾ ಸಮವಸ್ತ್ರ ಸಹಿತ ಪೇಟಸುತ್ತಿ ಸಮಾರಂಭದಲ್ಲಿ ಮಿರಿಮಿರಿ ಮಿಂಚುತ್ತಿದ್ದುದು ಶ್ಲಾಘನೆಗೆ ಪಾತ್ರವಾಯಿತು. ತೆಂಕುತಿಟ್ಟಿನಲ್ಲಿ ಕೊಂಡಿಕಳಚಿದ ಸಂಪ್ರದಾಯದ ಪುನರ್ ಸ್ಥಾಪನೆಯ ಪ್ರಯತ್ನ ಇದಾಗಿ ಭರವಸೆಯ ಗಮನ ಸೆಳೆಯಿತು.