ಕಾಸರಗೋಡು : ಪ್ರಾಚೀನ ಇತಿಹಾಸವಿರುವ ಬೊಂಬೆಯಾಟ ಕಲೆ ಇಂದು ಮತ್ತೆ ಪ್ರವರ್ಧಮಾನಕ್ಕೆ ಬರುತ್ತಿದೆ. ಈ ಕಲೆಯ ಉಳಿವಿಗಾಗಿ ಮತ್ತು ಜನಜಾಗೃತಿ ಮೂಡಿಸಲು ಗಡಿನಾಡಿನ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘವು ಹಮ್ಮಿಕೊಳ್ಳುತ್ತಿರುವ ಯೋಜನೆಗಳು ಔಚಿತ್ಯಪೂರ್ಣವಾಗಿವೆ ಎಂದು ಕೂಡ್ಲು ಶ್ರೀ ಗೋಪಾಲಕೃಷ್ಣ ಹೈಸ್ಕೂಲಿನ ವ್ಯವಸ್ಥಾಪಕ ಕೆ. ಜಿ. ಶಾನುಭೋಗ್ ಹೇಳಿದರು.
ಅಂತರಾಷ್ಟ್ರೀಯ ಯಕ್ಷ ಬೊಂಬೆಯಾಟ ಕಲಾವಿದ ಕೆ.ವಿ.ರಮೇಶ್ ಅವರ ನೇತೃತ್ವದ ಶ್ರೀಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ತಂಡ ಕಾಸರಗೋಡು ಹಮ್ಮಿಕೊಂಡಿರುವ ಸರಣಿ ಕಾರ್ಯಕ್ರಮದ ಭಾಗವಾಗಿ ಕೂಡ್ಲು ಹೈಸ್ಕೂಲಿನಲ್ಲಿ "ಶಾಲೆಯತ್ತ ಬೊಂಬೆ ಚಿತ್ತ" ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ತೆಂಕುತಿಟ್ಟು ಯಕ್ಷಗಾನದ ಏಕೈಕ ಬೊಂಬೆಯಾಟ ಸಂಸ್ಥೆಯಾದ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘವು ಯುವಜನ ವಿದ್ಯಾರ್ಥಿಗಳಲ್ಲಿ ಕಲಾಸಕ್ತಿ ಮೂಡಿಸಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದೆ. ಸಂಘದ ನಿರ್ದೇಶಕ ಹಾಗೂ ಪ್ರಧಾನ ಸೂತ್ರಧಾರ ಕೆ. ವಿ. ರಮೇಶ್ ಅವರ ಪರಿಕಲ್ಪನೆಯಲ್ಲಿ ಆರಂಭಗೊಂಡ ಅಭಿಯಾನಗಳು ಕಲಾಹೃದಯಗಳ ಪ್ರೋತ್ಸಾಹ ಮತ್ತು ಸಹಕಾರದಿಂದ ಯಶಸ್ಸಿನ ಹಾದಿಯಲ್ಲಿದೆ ಎಂದು ಕೆ. ಜಿ. ಶಾನುಭೋಗ್ ಹೇಳಿದರು.
ಫೋಕ್‍ಲ್ಯಾಂಡ್ ತ್ರಿಕರಿಪುರ ಹಾಗೂ ಡೋರ್ಫ್‍ಕೆಟಲ್ ಸಹಯೋಗದೊಂದಿಗೆ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘವು 'ಶಾಲೆಯತ್ತ ಬೊಂಬೆ ಚಿತ್ತ' ಅಭಿಯಾನವನ್ನು ಆಯೋಜಿಸಿದೆ. ಕೂಡ್ಲು ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆಯ ಮಾತೃ ರಕ್ಷಕ ಶಿಕ್ಷಕ ಅಧ್ಯಕ್ಷೆ ಶ್ರೀಮತಿ ವಾಸಂತಿಯವರು ಕಾರ್ಯಕ್ರಮಕ್ಕೆ ಶುಭ ಕೋರಿದರು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಹರಿ ಎನ್. ಸ್ವಾಗತಿಸಿ, ಸುನಿತಾ ಮಯ್ಯ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ 'ನರಕಾಸುರ ವಧೆ' ಯಕ್ಷಗಾನ ಬೊಂಬೆಯಾಟ ಪ್ರದರ್ಶನಗೊಂಡಿತು. ಬಳಿಕ ವಿದ್ಯಾರ್ಥಿಗಳಿಗೆ ಬೊಂಬೆ ಕುಣಿತದ ಪ್ರಾತ್ಯಕ್ಷಿಕೆ ನೀಡಲಾಯಿತು. ಕೆ. ವಿ. ರಮೇಶ ಕಾಸರಗೋಡು, ತಿರುಮಲೇಶ ಕೆ. ವಿ., ಭವ್ಯಶ್ರೀ ಆರ್. ಬಲ್ಲಾಳ್, ಸುನಿತಾ ಮಯ್ಯ, ಅನೀಶ್ ಪಿಲಿಕುಂಜೆ, ಶೋಭಾ ಯು. ಆಚಾರ್ಯ ಸೂತ್ರಧಾರಿಗಳಾಗಿ ಭಾಗವಹಿಸಿದರು.