ನವದೆಹಲಿ: ಉನ್ನಾವೋ ಅತ್ಯಾಚಾರದ ಸಂತ್ರಸ್ತೆ ಸಾವನ್ನಪ್ಪಿದ್ದು, ಅತ್ಯಾಚಾರಿಗಳ ವಿರುದ್ಧ ದೇಶಾದ್ಯಂತ ಆಕ್ರೋಶದ ಪ್ರತಿಭಟನೆಗಳಾಗುತ್ತಿವೆ.
ಸಂತ್ರಸ್ತೆಯ ಕುಟುಂಬ ಸದಸ್ಯರು ಹೈದರಾಬಾದ್ ನಲ್ಲಿ ಪಶುವೈದ್ಯೆಯ ಮೇಲೆ ಅತ್ಯಾರವೆಸಗಿ ಆಕೆಯನ್ನು ಹತ್ಯೆ ಮಾಡಿದ ಆರೋಪಿಗಳನ್ನು ಎನ್ ಕೌಂಟರ್ ಮಾಡಿದಂತೆಯೇ ಉನ್ನಾವೋ ನಲ್ಲಿ ನಡೆದಿರುವ ಅತ್ಯಾಚಾರ ಪ್ರಕರಣದ ಆರೋಪಿಗಳಿಗೂ ತಕ್ಕ ಶಾಸ್ತಿ ಮಾಡಬೇಕೆಂದು ಆಗ್ರಹಿಸಿದ್ದಾರೆ. ಈ ಎಲ್ಲದರ ನಡುವೆ ಉತ್ತರ ಪ್ರದೇಶದಲ್ಲಿರುವ ಬಿಜೆಪಿ ಸರ್ಕಾರದ ವಿರುದ್ಧ ವಿಪಕ್ಷಗಳು ವಾಗ್ದಾಳಿ ನಡೆಸಿದ್ದು, ಲೈಂಗಿಕ ದೌರ್ಜನ್ಯಕ್ಕೊಳಗಾದವರಿಗೆ ರಕ್ಷಣೆ ಒದಗಿಸಲು ವಿಫಲವಾಗಿದೆ ಎಂದು ವಿಪಕ್ಷಗಳು ಆರೋಪಿಸಿವೆ.
ಈ ಮಧ್ಯೆ ಯೋಗಿ ಆದಿತ್ಯನಾಥ್ ಸಂತ್ರಸ್ತೆಯ ಕುಟುಂಬಕ್ಕೆ ತ್ವರಿತ ನ್ಯಾಯ ಒದಗಿಸುವುದಾಗಿ ಭರವಸೆ ನೀಡಿದ್ದು, ಪ್ರಕರಣವನ್ನು ಇತ್ಯರ್ಥಗೊಳಿಸಲು ಫಾಸ್ಟ್ ಟ್ರ್ಯಾಕ್ ಕೋರ್ಟ್ ಸ್ಥಾಪನೆ ಮಾಡುವುದಾಗಿ, ಆರೋಪಿಗಳನ್ನು ಬಂಧಿಸುವುದಾಗಿ ಹೇಳಿದ್ದಾರೆ. ಅಷ್ಟೇ ಅಲ್ಲದೇ ಸಂತ್ರಸ್ತೆಯ ಕುಟುಂಬಕ್ಕೆ 25 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.