ಕುಂಬಳೆ: ಬಾನಾಡಿಗಳು ಗರಿಗೆದರುವ ನಿಟ್ಟಿನಲ್ಲಿ ಕಿದೂರು ಗ್ರಾಮ ಸಿದ್ಧಗೊಳ್ಳಲಿದೆ. ಕುಂಬಳೆ ಗ್ರಾಮಪಂಚಾಯತಿ ಕಿದೂರು ಪಕ್ಷಿಧಾಮಕ್ಕೆ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ಜಿಲ್ಲಾ ಮಟ್ಟದ ಸಮಿತಿ ಆಡಿತೆ ಮಂಜೂರಾತಿ ನೀಡಲು ನಿರ್ಧರಿಸಿದೆ. ಕುಂಬಳೆ ಕೋಟೆ, ತಿರುವನಂತುರಂ ಶ್ರೀ ಅನಂತಪದ್ಮನಾಭ ದೇವಾಲಯದ ಮೂಲತಾಣ ಎಂದು ಗುರುತಿಸಲಾಗುವ ಸರೋವರ ಕ್ಷೇತ್ರ ಅನಂತಪುರ ಸಹಿತ ಅನೇಕ ಆರಾಧನಾಲಯಗಳನ್ನು ಹೊಂದಿರುವ ಕುಂಬಳೆ ಗ್ರಾಮಪಂಚಾಯತಿಯಲ್ಲಿ ಪಕ್ಷಿಧಾಮವೊಂದು ತಲೆ ಎತ್ತಲಿರುವುದು ಪ್ರವಾಸೋದ್ಯಮ ಸಂಕಲ್ಪಗಳಿಗೆ ಚುರುಕುತನ ನೀಡಲಿದೆ. ಈ ಯೋಜನೆ ಅನುಷ್ಠಾನಗೊಳ್ಳುವ ವೇಳೆ ಜಿಲ್ಲೆಯಲ್ಲಿ ಪಕ್ಷಿಗಳ ನೈಸರ್ಗಿಕ ವಸತಿ ತಾಣವಾಗಿ ಕಿದೂರು ಮಾರ್ಪಾಟುಗೊಳ್ಳಲಿದೆ.
ಕಿದೂರು ಪಕ್ಷಿಧಾಮಕ್ಕೆ 2.7 ಕೋಟಿ ರೂ.ಮೀಸಲಿರಿಸಲಾಗಿದೆ. ಆರಿಕ್ಕಾಡಿಯಿಂದ 7 ಕಿಮೀ ದೂರದಲ್ಲಿರುವ ಕಿದೂರಿನಲ್ಲಿ ಸರಿಸುಮಾರು 170 ರಷ್ಟು ಹಕ್ಕಿಗಳ ನೈಸರ್ಗಿಕ ಧಾಮವಿದೆ. ವಿವಿಧೆಡೆಗಳಿಂದ ಪಕ್ಷಿ ಸಮೂಹ ಇಲ್ಲಿ ನೆಲೆಗೊಳ್ಳುವ ಹಿನ್ನೆಲೆಯಲ್ಲಿ ದೇಶ-ವಿದೇಶಗಳ ಹಕ್ಕಿಪ್ರೇಮಿಗಳು ಇಲ್ಲಿಗೆ ಆಕರ್ಷಿತರಾಗುತ್ತಿದ್ದಾರೆ. ಕ್ಯಾಂಪಿಂಗ್, ಹಕ್ಕಿ ವೀಕ್ಷಣೆ ಸಹಿತ ವಿವಿಧ ಉದ್ದೇಶಗಳಿಗೆ ಮೂಲಭೂತ ಸೌಲಭ್ಯ ಒದಗಿಸುವ ಯೋಜನೆ ಈ ಮೂಲಕ ನಡೆಯಲಿದೆ.
ನದಿ ತಟದಲ್ಲಿ ಕಾಲ್ನಡಿಗೆ ಹಾದಿ, ಫಲ ಬಿಡುವ ಮರವಾಗಬಲ್ಲ ಸಸಿಗಳನ್ನು ನೆಡುವುದು ಸಹಿತ ಪ್ರಕೃತಿ ಸ್ನೇಹಿ ಚಟುವಟಿಕೆಗಳೊಂದಿಗೆ ಚಟುವಟಿಕೆಗಳು 2.7 ಕೋಟಿ ರೂ. ನಲ್ಲಿ ನಡೆಯಲಿವೆ. ಅಧುನಿಕ ತಂತ್ರಜ್ಞಾನದ ಸಹಾಯದೊಂದಿಗೆ ಜಾರಿಗೊಳಿಸುವ ಸೋಲಾರ್ ದಾರಿದೀಪಗಳು, ಅತ್ಯಧುನಿಕ ಶೌಚಾಲಯಗಳು, ಎಫ್.ಆರ್.ಪಿ.ತ್ಯಾಜ್ಯ ಸಂಗ್ರಹ ಸೌಲಭ್ಯ ಇತ್ಯಾದಿ ಜಾರಿಗೊಳಿಸಲಾಗುವುದು.
ಪಕ್ಷಿಧಾಮದಲ್ಲಿ ಮೂಲಭೂತ ಸೌಲಭ್ಯಗಳಿಗೆ ಬೇಕಾದ ಜಾಗವನ್ನು ಈಗಾಗಲೇ ಗ್ರಾಮಪಂಚಾಯತಿ ನೀಡಿದೆ. ಪೂರ್ಣರೂಪದಲ್ಲಿ ಪ್ರಕೃತಿ ಸ್ನೇಹಿ ಚಟುವಟಕೆಗಳನ್ನು ಇಲ್ಲಿ ನಡೆಸಲಾಗುವುದು. ಯೋಜನೆ ಜಾರಿಯಾಗಲಿರುವ ಪ್ರದೇಶವನ್ನು ಸ್ಥಳೀಯ ಕೃಷಿ ವಿಜ್ಞಾನಿಯೂ ಆಗಿರುವ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರು ಈಗಾಗಲೇ ಸಂದರ್ಶಿಸಿ ಅವಲೋಕನ ನಡೆಸಿದ್ದಾರೆ. ಡಾ.ಪ್ರಭಾಕರನ್ ಆಯೋಗ ವರದಿ ಪ್ರಕಾರ ಕುಂಬಳೆ ಗ್ರಾಮೀಣ ಯೋಜನೆ ಜಾರಿಗೆ ಆದೇಶ ನೀಡಲಾಗಿತ್ತು.
ಈ ಸಂಬಂಧ ಜಿಲ್ಲಾಧಿಕಾರಿ ಛೇಂಬರ್ ನಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ಎ.ಜಿ.ಸಿ.ಬಶೀರ್, ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ವಿಶೇಷ ಅಧಿಕಾರಿ ಇ.ಪಿ.ರಾಜ್ ಮೋಹನ್, ಪ್ರವಾಸೋದ್ಯಮ ಸಹಾಯಕ ನಿರ್ದೇಶಕಿ ಬೇಬಿ ಷೀಜಾ, ಡಿ.ಟಿ.ಪಿ.ಸಿ. ಕಾರ್ಯದರ್ಶಿ ಬಜು ರಾಘವನ್, ಜಿಲ್ಲಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ವಿಶಿಷ್ಟತೆ:
ಕಿದೂರಿಗಿದು ಬಂಗಾರದ ಸೊಂಟ ಪಟ್ಟಿ:
ಭತ್ತದ ಕೃಷಿ ಪ್ರಧಾನವಾಗಿರುವ, ಕರ್ಗಲ್ ಪಾರೆಯೇ ಅಧಿಕವಾಗಿರುವ, ಲ್ಯಾಟರೈಟ್ ಭೂಮಿಯನ್ನು ಹೊಂದಿರುವ ಕಿದೂರು ಗ್ರಾಮಕ್ಕೆ ಈ ಪಕ್ಷಿಧಾಮದ ಸಾಕ್ಷಾತ್ಕಾರ ಬಂಗಾರದ ಸೊಂಟಪಟ್ಟಿಯಾಗಲಿದೆ. ಶಿರಿಯ ನದಿಯ ಆವರಣದಲ್ಲಿ ಪ್ರಕೃತಿ ಸೌಂದರ್ಯ ಹೊಂದಿರುವ ವಾತಾವರಣದಲ್ಲಿ ಕಕಿಗಳ ಸ್ವತಂತ್ರ ವಿಹರಕ್ಕೆ ಪೂರಕ ಸನ್ನಿವೇಶಗಳಿವೆ. ಸರಿಸುಮಾರು 174 ಜಾತಿಗಳ ಹಕ್ಕಿಗಳು ಇಲ್ಲಿ ನೆಲೆಗೊಂಡಿರುವುದು ವೈಜ್ಞಾನಿಕವಾಗಿ ಪತ್ತೆಯಾಗಿದೆ. ವಂಶನಾಶದ ಭೀತಿಯಲ್ಲಿರುವ ಬುಲ್ ಬುಲ್, ಕಡಲಕಾಗೆ ಸಹಿತ 38 ವಿಭಾಗಗಳ ಬಾನಾಡಿಗಳು, ಗರುಡ ಸಹಿತ ವಿಶೇಷ ಜಾತಿಯ ಪಕ್ಷಿಗಳು ಇಲ್ಲಿ ಕಂಡುಬರುತ್ತವೆ. ವಿಶ್ವದ ಅತಿದೊಡ್ಡ ಜಾತಿಯ ಹಕ್ಕಿ ಪ್ರೇಮಿಗಳ ಸಂಘಟನೆ "ಇ-ಬಡ್ರ್ಸ್" ಇಲ್ಲಿ 160 ವಿಧದ ಹಕ್ಕಿಗಳಿರುವುದ್ನು ಖಚಿತಪಡಿಸಿದೆ. ಹಳದಿ ಕೊರಳ ಪಟ್ಟಿಯ ಪಾರಿವಾಳ ಇಲ್ಲಿ ಧಾರಾಳವಾಗಿವೆ.
ಹಕ್ಕಿವೀಕ್ಷಣೆಗಾಗಿಯೇ ಇಲ್ಲಿ ಕುಂಬಳೆ ಗ್ರಾಮಪಂಚಾಯತ್ ನ ಸಹಾಯದೊಂದಿಗೆ ಇಲ್ಲಿ ವರ್ಷಕ್ಕೆ ಸುಮಾರು 8 ಶಿಬಿರಗಳು ನಡೆಯುತ್ತವೆ.