ಮುಳ್ಳೇರಿಯ: ನಮ್ಮ ಕನ್ನಡ ಮಣ್ಣಿನ ಕಲೆಯಾದ ಯಕ್ಷಗಾನದ ಬೊಂಬೆಯಾಟವನ್ನು ಉಳಿಸಿ ಬೆಳೆಸಬೇಕಾದ ತುರ್ತು ನಮ್ಮ ಮುಂದಿದೆ. ಈ ನಿಟ್ಟಿನಲ್ಲಿ ಶಾಲೆಯತ್ತ ಬೊಂಬೆ ಚಿತ್ತ ಎಂಬ ಈ ಕಾರ್ಯಕ್ರಮ ಶ್ಲಾಘನೀಯ ಎಂದು ಹಿರಿಯ ವಿದ್ವಾಂಸ, ಅರ್ಥಧಾರಿ ಬೆಳ್ಳಿಗೆ ನಾರಾಯಣ ಮಣಿಯಾಣಿ ಹೇಳಿದರು.
ಅಂತರಾಷ್ಟ್ರೀಯ ಖ್ಯಾತಿಯ ಬೊಂಬೆಯಾಟ ಕಲಾವಿದ ಕೆ.ವಿ.ರಮೇಶ್ ಕಾಸರಗೋಡು ಅವರು ಹಮ್ಮಿಕೊಂಡಿರುವ ವಿಶೇಷ ಬೊಂಬೆಯಾಟ ಜಾಗೃತಿ ಕಾರ್ಯಕ್ರಮ "ಶಾಲೆಯತ್ತ ಬೊಂಬೆ ಚಿತ್ತ"ದ ಭಾಗವಾಗಿ ಅವರು ಕಾರಡ್ಕ ಸರ್ಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಇತ್ತೀಚೆಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾಸರಗೋಡಿನ ಈ ಮಣ್ಣಿನ ಕಲೆ ಯಕ್ಷಗಾನ ಬೊಂಬೆಯಾಟವನ್ನು ಮಕ್ಕಳಿಗೆ ತಲುಪಿಸುವ ಮೂಲಕ ಮುಂದಿನ ಜನಾಂಗದಲ್ಲಿ ಈ ಕುರಿತು ಆಸಕ್ತಿ ಮೂಡಿಸಲು ಸಾಧ್ಯವಾಗುವುದು.ಆಧುನಿಕ ವ್ಯವಸ್ಥೆಗಳ ಮಧ್ಯೆ ಪಾರಂಪರಿಕ ವಿಚಾರಗಳು, ಕಲೆ, ಸಾಂಸ್ಕøತಿಕ ನೆಲೆಗಟ್ಟುಗಳ ಪರಿಚಯಾತ್ಮಕ ಚಟುವಟುಕೆಗಳು ಬೆಂಬಲ ನೀಡುತ್ತದೆ ಎಂದು ಅವರು ತಿಳಿಸಿದರು.
ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದ ನಿವೃತ್ತ ಮುಖ್ಯೋಪಾಧ್ಯಾಯ ಡಾ.ಬೇ.ಸಿ ಗೋಪಾಲಕೃಷ್ಣ ಭಟ್ ಅವರು, ಮಕ್ಕಳು ಪಠ್ಯ ಪಠ್ಯೇತರ ಚಟುವಟಿಕೆಗಳಲ್ಲಿ ಮುಂದಿರುವಂತಾಗಬೇಕು. ಕೇವಲ ಪುಸ್ತಕದ ಶಿಕ್ಷಣಕ್ಕಿಂತ ಹೊರತಾದ ಈ ರೀತಿಯ ಚಟುವಟಿಕೆ ಆಧಾರಿತ ಶಿಕ್ಷಣವು ಪರಿಣಾಮಕಾರಿಯಾಗಿರುತ್ತದೆ ಎಂದರು.
ಶಾಲಾ ಹಿರಿಯ ಶಿಕ್ಷಕಿ ಭಾನುಮತಿ ಅಧ್ಯಕ್ಷತೆ ವಹಿಸಿದ್ದರು. ಅಧ್ಯಾಪಕರಾದ ಸತೀಶ ಮಾಸ್ತರ್, ಅನಿತಾ ಟೀಚರ್ ಶುಭ ಹಾರೈಸಿದರು. ಪ್ರಶಾಂತ್ ಪಾಣಾಜೆ, ಕೆ.ವಿ.ರಮೇಶ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರು ಸುಶ್ರಾವ್ಯವಾಗಿ ಪ್ರಾರ್ಥನೆ ಹಾಡಿದರು. ಶಿಕ್ಷಕ ಶ್ರೀಶ ಪಂಜಿತ್ತಡ್ಕ ಸ್ವಾಗತಿಸಿ ನಿರೂಪಿಸಿದರು. ರಾಮಚಂದ್ರ ಮಾಸ್ತರ್ ವಂದಿಸಿದರು.
ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘದ ರೂವಾರಿ ಕೆ.ವಿ.ರಮೇಶ್ ಶಾಲಾಗ್ರಂಥಾಲಯಕ್ಕೆ ಪುಸ್ತಕ ಕೊಡುಗೆ ನೀಡಿದರು. ಕೆ.ವಿ.ರಮೇಶ್ ನೇತೃತ್ವದಲ್ಲಿ ಭವ್ಯಶ್ರೀ ಬಲ್ಲಾಳ್, ಶೋಭಾ ಅವರು ನರಕಾಸುರ ಮೋಕ್ಷ ಬೊಂಬೆಯಾಟವನ್ನು ಪ್ರದರ್ಶಿಸಿದರು. ಅವರಿಗೆ ಶಾಲೆಯ ವತಿಯಿಂದ ಪುಸ್ತಕಸ್ಮರಣಿಕೆ ನೀಡಿ ಗೌರವಿಸಲಾಯಿತು. ಆಕರ್ಷಣೀಯವಾಗಿ ಕಾರ್ಯಕ್ರಮವು ಮೂಡಿಬಂತು. ಶಾಲಾ ವಿದ್ಯಾರ್ಥಿಗಳು, ಅಧ್ಯಾಪಕರು ತುಂಬಿದ್ದ ಸಭಾಂಗಣ ಕಾರ್ಯಕ್ರಮದ ಯಶಸ್ಸಿಗೆ ಕಾರಣವಾಯಿತು.