ನವದೆಹಲಿ: ಶಬರಿಮಲೆ ಪ್ರವೇಶಕ್ಕೆ ಪೆÇಲೀಸ್ ಭದ್ರತೆಯಲ್ಲಿ ರಕ್ಷಣೆ ನೀಡಲು ಕೇರಳ ಸರ್ಕಾರಕ್ಕೆ ಆದೇಶ ನೀಡಬೇಕೆಂದು ಕೋರಿ ಇಬ್ಬರು ಮಹಿಳಾ ಕಾರ್ಯಕರ್ತರು ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ.
ಈ ವಿಚಾರ ತುಂಬಾ ಭಾವನಾತ್ಮಕವಾಗಿದ್ದು ಪರಿಸ್ಥಿತಿ ವಿಕೋಪಕ್ಕೆ ಹೋಗುವುದು ಬೇಡ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ನೇತೃತ್ವದ ನ್ಯಾಯಪೀಠ, ಶಬರಿಮಲೆಗೆ ಎಲ್ಲಾ ವಯೋಮಾನದ ಮಹಿಳೆಯರು ಪ್ರವೇಶದ ವಿವಾದ ಈಗಾಗಲೇ ಏಳು ನ್ಯಾಯಾಧೀಶರ ಪೀಠಕ್ಕೆ ಉಲ್ಲೇಖಿಸಿರುವುದರಿಂದ ಈಗ ಯಾವುದೇ ಆದೇಶ ಹೊರಡಿಸುವ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ. ಈ ವಿವಾದವನ್ನು ಆಲಿಸಲು ಶೀಘ್ರದಲ್ಲಿಯೇ ವಿಸ್ತೃತ ನ್ಯಾಯಪೀಠವನ್ನು ರಚಿಸಲು ಪ್ರಯತ್ನಿಸುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ.
ನ್ಯಾಯಮೂರ್ತಿಗಳಾದ ಬಿ ಆರ್ ಗವೈ ಮತ್ತು ಸೂರ್ಯಕಾಂತ್ ಅವರನ್ನೊಳಗೊಂಡಿರುವ ನ್ಯಾಯಪೀಠ, 2018ರ ಸೆಪ್ಟೆಂಬರ್ 28ರ ಆದೇಶಕ್ಕೆ ತಡೆ ನೀಡದಿದ್ದರೂ ಕೂಡ ಎಲ್ಲಾ ವಯೋಮಾನದ ಮಹಿಳೆಯರು ಶಬರಿಮಲೆ ಪ್ರವೇಶಿಸಬಹುದು ಎಂದಿದ್ದ ಆದೇಶ ಅಂತಿಮವಲ್ಲ ಎಂಬುದು ಕೂಡ ಅಷ್ಟೇ ಸತ್ಯ ಎಂದು ಹೇಳಿದೆ.