ಪೆರ್ಲ: ಹುಳು ಹುಪ್ಪಟೆಗಳು ಹಕ್ಕಿಗಳಿಗೆ ಬಲು ಇಷ್ಟ, ಅವುಗಳನ್ನು ಸೇವಿಸುವುದರಿಂದಾಗಿ ಹಾಗೂ ಕೆಲವು ಪಕ್ಷಿಗಳು ಪರಿಸರ ಸ್ವಚ್ಛತೆಗೆ ಕೈಜೋಡಿಸುವುದರ ಫಲವಾಗಿ ಮನುಷ್ಯನಿಗೆ ಅನಾರೋಗ್ಯ ಬಾಧಿಸುವ ಸಾಧ್ಯತೆ ಹಾಗೂ ಮಾಲಿನ್ಯ ಕಡಿಮೆಯಾಗುತ್ತದೆ. ಆದುದರಿಂದ ಪಕ್ಷಿಗಳು ಮಾನವನ ಅಸ್ತಿತ್ವಕ್ಕೆ ಪೂರಕ ಎಂದು ಖ್ಯಾತ ಪಕ್ಷಿ ನಿರೀಕ್ಷಕ ರಾಜು ಕಿದೂರ್ ಹೇಳಿದರು.
ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರ್ಕಾರಿ ಕಾಲೇಜಿನ ನೇತೃತ್ವದಲ್ಲಿ ನಿಸರ್ಗ ಬೆದ್ರಂಪಳ್ಳದ ಪ್ರಯೋಜಕತ್ವದಲ್ಲಿ ಮಂಜೇಶ್ವರ, ಕಾಸರಗೋಡು ಸರ್ಕಾರಿ ಕಾಲೇಜು ಹಾಗೂ ಪೆರ್ಲ ನಾಲಂದ ಕಾಲೇಜಿನ ಎನ್ನೆಸ್ಸೆಸ್ ಘಟಕ ಹಾಗೂ ಭೂಮಿತ್ರಸೇನಾ ಕ್ಲಬ್ ಗಳ ಸಹಕಾರದೊಂದಿಗೆ ಬೆದ್ರಂಪಳ್ಳ ನಿಸರ್ಗದಲ್ಲಿ ನಡೆದ ಜೈವ ವೈವಿಧ್ಯ ಶಿಬಿರದ ಎರಡನೇ ದಿನ ಪಕ್ಷಿ ವೀಕ್ಷಣೆ ನಡೆಸಿ, ಪಕ್ಷಿಗಳ ಅಸ್ವಿತ್ವ, ಜೀವ ಸಂಕೋಲೆಯಲಲಿ ಅವುಗಳ ಪಾತ್ರದ ಬಗ್ಗೆ ಅವರು ಮಾತನಾಡಿದರು.
ಯುವ ಜನಾಂಗ ಪಕ್ಷಿ ನಿರೀಕ್ಷಣೆ, ಚಿಟ್ಟೆ ದುಂಬಿಗಳ ಅನ್ವೇಷಣೆಯೊಂದಿಗೆ ಗಿಡ ಮರ ಬಳ್ಳಿಗಳ ಬಗೆಗಿನ ಜ್ಞಾನವನ್ನು ಹೆಚ್ಚಿಸಿ ಪರಿಸರ ಸಂರಕ್ಷಣೆಯತ್ತ ಮುನ್ನುಗ್ಗಬೇಕಾದ ಅವಶ್ಯಕತೆಯನ್ನು ಹವಾಮಾನ ಬದಲಾವಣೆಯು ಸಾರಿ ಹೇಳುತ್ತಿದೆ. ಜೈವ ವೈವಿಧ್ಯತೆಯ ನಾಶ, ನಗರೀಕರಣ, ಮಾರಕವಾದ ಮಾಲಿನ್ಯ, ಟವರ್ ಗಳ ಹೆಚ್ಚಳ, ಕ್ರಿಮಿನಾಶಗಳ ಬಳಕೆಯಿಂದಾಗಿ ಹಕ್ಕಿಗಳ ಸಂಖ್ಯೆ ಕಡಿಮೆಯಾಗುತ್ತಿದ್ದು, ಬಾನಾಡಿಗಳು ಕಡಿಮೆಯಾದರೆ ಪ್ರಕೃತಿಯಲ್ಲಿ ಸಮತೋಲನ ತಪ್ಪುತ್ತದೆ. ಕ್ರಿಮಿ ಕೀಟಗಳ ಸಂಖ್ಯೆ ದುಪ್ಪಟ್ಟು ಗೊಳ್ಳಬಹುದು. ಬೀಜ ಪ್ರಸಾರ ಇಲ್ಲದಾಗಿ ಕಾಡಿನ ನಾಶ ಉಂಟಾಗಬಹುದು. ತನ್ಮೂಲಕ ಹವಾಮಾನ ಬದಲಾವಣೆ ಮತ್ತಿತರ ಹಲವಾರು ಸಮಸ್ಯೆಗಳು ಬಾಧಿಸುವುದರಲ್ಲಿ ಸಂಶಯವಿಲ್ಲ. ಆದುದರಿಂದ ಪ್ರತಿಯೊಬ್ಬರೂ ಇಂದು ಪಕ್ಷಿ ನಿರೀಕ್ಷಕರೋ, ಪರಿಸರ ಸಂರಕ್ಷಕರೋ ಅಥವಾ ಜೈವ ವೈವಿಧ್ಯತೆ ಕಾಪಾಡುವ ಉತ್ತಮ ನಾಗರಿಕರಾಗಬೇಕಿದೆ. ಇದರಿಂದ ಪರಿಸರವನ್ನು ಸೂಕ್ಷ್ಮವಾಗಿ ಗಮನಿಸಲು ಸಾಧ್ಯ, ಉತ್ತಮ ಆರೋಗ್ಯ ಹಾಗೂ ಮಾನಸಿಕ ಸಂತೋಷದ ಜೀವನ ನಮ್ಮದಾಗಲು ಸಾಧ್ಯ ಎಂದರು.
28 ವಿಧದ ಹಕ್ಕಿಗಳನ್ನು ವೀಕ್ಷಣೆ ಮಾಡಲಾಯಿತು. ಶಿಬಿರಾರ್ಥಿಗಳು ಹಾಗೂ ಶಿಬಿರದ ಸಂಯೋಜಕ ಮೊಹಮ್ಮದ್ ಅಲಿ ಮೊದಲಾದವರು ಉಪಸ್ಥಿತರಿದ್ದರು.