ಕಾಸರಗೋಡು: ಸಂವಿಧಾನಾತ್ಮಕವಾಗಿ ಅಂಗೀಕಾರ ಪಡೆದಿರುವ ಪೌರತ್ವ ತಿದ್ದುಪಡಿ ಕಾನೂನು ವಿರುದ್ಧ ಕೇರಳ ಸರ್ಕಾರ ಗೊತ್ತುವಳಿ ಮಂಡನೆಗೆ ಮುಂದಾಗಿರುವುದು ಪ್ರಜಾಪ್ರಭುತ್ವ ವಿರೋಧಿಯಾಗಿದೆ ಎಂದು ಬಿಜೆಪಿ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ. ಸುರೇಂದ್ರನ್ ತಿಳಿಸಿದ್ದಾರೆ.
ಅವರು ಸೋಮವಾರ ಕಾಸರಗೋಡಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಅಲ್ಪಸಂಖ್ಯಾತರ ತುಷ್ಠೀಕರಣಕ್ಕೆ ಪೈಪೋಟಿ ನಡೆಸುತ್ತಿರುವ ಎಡರಂಗ ಹಾಗೂ ಐಕ್ಯರಂಗದ ಈ ಧೋರಣೆಯಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವಿನ ಉತ್ತಮ ಬಾಂಧವ್ಯಕ್ಕೆ ಧಕ್ಕೆಯಾಗುವ ಸಾಧ್ಯತೆಯಿದೆ. ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸರ್ವಪಕ್ಷ ಹಾಗೂ ಧಾರ್ಮಿಕ ಸಂಘಟನೆಗಳ ಸಭೆ ಆಯೋಜಿಸಿದ್ದರೂ, ಇದರಲ್ಲಿ ಎಲ್ಲ ಸಂಘಟನೆಗಳು ಕೈಜೊಡಿಸಿಲ್ಲ. ಇದರಿಂದ ಸಭೆಯನ್ನು ಕೇರಳದ ಜನತೆಯ ಅಭಿಪ್ರಾಯವಾಗಿ ಸ್ವಿಕರಿಸಲಾಗದು ಎಂದು ತಿಳಿಸಿದರು.
ಕಣ್ಣೂರು ವಿಶ್ವ ವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ಭಾರತೀಯ ಇತಿಹಾಸ ಕಾಂಗ್ರೆಸ್ ಸಮಾರಂಭದ ಉದ್ಘಾಟನೆಗೆ ಆಗಮಿಸಿದ್ದ ರಾಜ್ಯಪಾಲ ಆರಿಫ್ ಮಹಮ್ಮದ್ ಖಾನ್ ಅವರ ವಿರುದ್ಧ ನಡೆದ ಪ್ರತಿಭಟನೆ ಹಾಗೂ ಅವರ ಭದ್ರತಾ ಸಿಬ್ಬಂದಿ ಮೇಲೆ ನಡೆದ ಹಲ್ಲೆ ಯತ್ನ ಖಂಡನೀಯ ಹಾಗೂ ಅಸಂವಿಧಾನಿಕವಾಗಿದೆ. ಕೇರಳದಲ್ಲಿ ಮುಖ್ಯಮಂತ್ರಿ ಎದುರು ಕರಿಪತಾಕೆ ಪ್ರದರ್ಶಿಸಿದವರಿಗೆ ಎರಡುವಾರ ಕಾಲ ಜಾಮೀನುರಹಿತ ಬಂಧನ ವಿಧಿಸಿರುವ ಪೊಲೀಸರು, ರಾಜ್ಯಪಾಲರ ಮೇಲೆ ಹಲ್ಲೆಗೆ ಮುಂದಾದರೂ, ಪೊಲೀಸರು ಯಾವುದೇ ಕ್ರಮ ಕೈಗೊಳ್ಳದೆ, ಮೂಕಪ್ರೇಕ್ಷಕರಾಗಿರುವುದು ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಹದಗೆಟ್ಟಿರುವ ಸಂಕೇತವಾಗಿದೆ. ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮೇಲೆ ಕಿಡಿಗೇಡಿಗಳು ಹಲ್ಲೆಗೆ ಮುಂದಾಗುವ ಸಂದರ್ಭ ಪೊಲೀಸರು ಇದೇ ನಿಲುವು ತಾಳಿದ್ದರು.ಪಾಲರ ಮೇಲೆ ಹಲ್ಲೆಗೆ ಯತ್ನಿಸಿ 72ತಾಸು ಕಳೆದರೂ, ಪೊಲೀಸರು ಯಾವುದೇ ಕೇಸು ದಾಕಲಿಸಿಕೊಳ್ಳದಿರುವ ಬಗ್ಗೆ ಕೇಂದ್ರ ಗೃಹ ಖಾತೆಗೆ ದೂರು ನೀಡಲು ಬಿಜೆಪಿ ತೀರ್ಮಾನಿಸಿರುವುದಾಗಿ ತಿಳಿಸಿದರು.
ಪೌರತ್ವ ತಿದ್ದುಪಡಿ ಕಾನೂನು ವಿರುದ್ಧ ನಡೆಯುತ್ತಿರುವ ಹೋರಾಟದಲ್ಲಿ ಸಿಪಿಎಂನೊಂದಿಗೆ ಕೈಜೋಡಿಸಿರುವ ಪ್ರತಿಪಕ್ಷ ಮುಖಂಡ ರಮೇಶ್ ಚೆನ್ನಿತ್ತಲ ಅವರಿಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕಾಲಿನಡಿ ಬಿದ್ದು ನಲುಗುವ ದಯನೀಯ ಸ್ಥಿತಿ ನಿರ್ಮಾಣವಾಗಿದೆ. ಕೇರಳದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಗಳ ಬಗ್ಗೆ ಸೊಲ್ಲೆತ್ತದ ರಮೇಶ್ ಚೆನ್ನಿತ್ತಲ, ತಮ್ಮಪಕ್ಷದ ಆಡಳಿತಾವಧಿಯಲ್ಲಿನ ಅವ್ಯವಹಾರ ಹೊರಬಾರದಿರುವಂತೆ ಸರ್ಕಾರದ ಜತೆ ಕೈಜೋಡಿಸಿದ್ದಾರೆ. ಕೇರಳದಲ್ಲಿ ಅಲ್ಪಸಂಖ್ಯಾತರ ಹಾಗು ಸಂವಿಧಾನ ರಕ್ಷಣೆ ಹೊಣೆಯನ್ನು ಪಿಣರಾಯಿ ವಿಜಯನ್‍ಗೆ ಧಾರೆಯೆರೆದುಕೊಟ್ಟಿರುವ . ಪ್ರತಿಪಕ್ಷ ಮುಖಂಡ ರಮೇಶ್ ಚೆನ್ನಿತ್ತಲ ರಾಜಕೀಯಸನ್ಯಾಸ ಸ್ವೀಕರಿಸುವುದು ಒಳಿತು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷ ಕೆ.ಶ್ರೀಕಾಂತ್, ರಾಜ್ಯ ಸಮಿತಿ ಉಪಾಧ್ಯಕ್ಷೆ ಪ್ರಮಿಳಾ ಸಿ.ನಾಯ್ಕ್ ಉಪಸ್ಥಿತರಿದ್ದರು.