ಮಧೂರು: ಕೂಡ್ಲು ಸಮೀಪದ ಬಾದಾರದ ಶೇಷವನ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದಲ್ಲಿ ಚಂಪಾ ಷಷ್ಠಿ ಉತ್ಸವವು ಡಿ.1 ಮತ್ತು 2ರಂದು ಶ್ರೀ ಕ್ಷೇತ್ರದ ತಂತ್ರಿವರ್ಯರಾದ ಬ್ರಹ್ಮಶ್ರೀ ಅರವತ್ ದಾಮೋದರ ತಂತ್ರಿವರ್ಯರ ನೇತೃತ್ವದಲ್ಲಿ, ಅರ್ಚಕರಾದ ಸುಬ್ರಾಯ ಕಾರಂತ, ಸಹಾಯಕ ಅರ್ಚಕರಾದ ಗೋಪಾಲಕೃಷ್ಣ ಕಾರಂತರ ಸಹಕಾರದೊಂದಿಗೆ ವಿವಿಧ ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ವೈಭವದಿಂದ ಆರಂಭಗೊಂಡಿತು. .
ಡಿ.1ರಂದು ಬೆಳಗ್ಗೆ ಗಣಪತಿಹವನ, ಶ್ರೀ ನಾಗ ಸನ್ನಿದಿಯಲ್ಲಿ ಸಾಮೂಹಿಕ ನಾಗತಂಬಿಲ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಿತು. ಬೆಳಗ್ಗೆ 9.30ರಿಂದ ಕುತ್ಯಾಳ ಶ್ರೀ ಗೋಪಾಲಕೃಷ್ಣ ಯಕ್ಷಗಾನ ತರಬೇತಿ ಕೇಂದ್ರದವರಿಂದ ತಾಳಮದ್ದಳೆ ನಡೆಯಿತು. ಸಂಜೆ ಪುಣ್ಯಾಹ, ಪ್ರಾಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಬಲಿ ಜರಗಿತು.ರಾತ್ರಿ 7 ರಿಂದ ಸ್ಥಳೀಯ ಮಕ್ಕಳಿಂದ ನೃತ್ಯ ಸಂಗಮ ಪ್ರದರ್ಶನಗೊಂಡಿತು.
ಇಂದು (ಡಿ.2) ಬೆಳಗ್ಗೆ ಗಣಪತಿಹವನ, ಬಿಂಬ ಶುದ್ಧಿ, ಕಲಶ ಪೂಜೆ, ಕಲಶಾಭಿಷೇಕ ಮಹಾಪೂಜೆ, ಶ್ರೀ ರಕ್ತೇಶ್ವರಿ ಗುಳಿಗ ಸನ್ನಿಧಿಯಲ್ಲಿ ತಂಬಿಲ, ಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ, 9.30 ಕ್ಕೆ ಮಧೂರು ಶ್ರೀ ಮಹಾಗಣಪತಿ ಯಕ್ಷಗಾನ ಕಲಾ ಸಂಘದಿಂದ ಯಕ್ಷಗಾನ ತಾಳಮದ್ದಳೆ, ಮದ್ಯಾಹ್ನ 12.30ರಿಂದ ಕೀರ್ತನ ಕುಠೀರ ಕುಂಬಳೆ ನೇತೃತ್ವದಲ್ಲಿ ಕಲಾರತ್ನ ಶಂನಾಡಿಗ ಕುಂಬಳೆ ಇವರ ಶಿಷ್ಯೆಯರಿಂದ ಹರಿಕಥಾ ಸತ್ಸಂಗ, ಸಂಜೆ 6ಕ್ಕೆ ತಾಯಂಬಕ, ಭಜನೆ, ರಾತ್ರಿ ಪೂಜೆ, ಶ್ರೀ ಭೂತಬಲಿ, ವಿಶೇಷ ಪಾಂಡಿಮೇಳ ಚೆಂಡೆಸೇವೆ, ಸಿಡಿಮದ್ದು ಸೇವೆ, ದರ್ಶನಬಲಿ, ಬಟ್ಟಲುಕಾಣಿಕೆ, ರಾಜಾಂಗಣ ಪ್ರಸಾದ ನಡೆಯಲಿದೆ.