ಪೆರ್ಲ: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಸುಳ್ಯ, ಬೆಳ್ತಂಗಡಿ, ಬಂಟ್ವಾಳ ಸಹಿತ ಗಡಿನಾಡು ಕಾಸರಗೋಡು ಜಿಲ್ಲೆಯ ಉದ್ದಗಲ ದಾಸ ಸಾಹಿತ್ಯ ಭಜನಾ ಕ್ರಾಂತಿಯನ್ನೆಬ್ಬಿಸಿ, ಹರಿಭಜನಾ ಸಾಹಿತ್ಯ ಸಂಸ್ಕøತಿಯನ್ನು ಪುನರುಜ್ಜೀವಿಸಲು ಮುಂದಾದ ಸಂಕೀರ್ತನಕಾರ ರಾಮಕೃಷ್ಣ ಕಾಟುಕುಕ್ಕೆ ಅವರು ಪ್ರಸ್ತುತ ಔದ್ಯೋಗಿಕವಾಗಿ ಹರಿದಾಸ ದೀಕ್ಷಾವಿಧಿ ಸ್ವೀಕರಿಸಲು ಮುಂದಾಗಿದ್ದಾರೆ. 2020 ಜನವರಿ 2ರಿಂದು ಉಡುಪಿ ಶ್ರೀ ಮದ್ವಾಚಾರ್ಯ ಮೂಲಸಂಸ್ಥಾನದ ಉಡುಪಿ ಶ್ರೀಕೃಷ್ಣ ಮಠದಲ್ಲಿ ಪರ್ಯಾಯ ಪಲಿಮಾರು ಮಠಾಧೀಸರಿಂದ ಅವರು ಅವರು ಔದ್ಯೋಗಿಕ ಹರಿದಾಸ ದೀಕ್ಷಾಔಇದಿ ಸ್ವೀಕರಿಸುವರು. ಕರಾವಳಿಯಲ್ಲಿ ಹರಿಭಜನಾ ಸಾಹಿತ್ಯ ಸಂಸ್ಕøತಿಯಲ್ಲಿ ಸಾಧನೆಗೈದು, ಸ್ವಯಂಪ್ರಚೋದನೆಯಿಂದ ವ್ಯಕ್ತಿಯೊಬ್ಬರು ಹರಿದಾಸ ಸ್ವೀಕರಿಸುತ್ತಿರುವುದು ಇದೇ ಮೊದಲು..
ರಾಮಕೃಷ್ಣರು ಕೇರಳ-ಕರ್ನಾಟಕ ಗಡಿಯ ಎಣ್ಮಕಜೆ ಪಂಚಾಯತ್ ವ್ಯಾಪ್ತಿಯ ಕಾಟುಕುಕ್ಕೆ ಕ್ಷೇತ್ರ ಬಳಿ ನಿವಾಸಿ. ಕಲಿತದ್ದು ಇಂಜಿನಿಯರಿಂಗ್ ಪದವಿ. ಆದರೆ ಕ್ಷೇತ್ರ ಮತ್ತು ಮನೆ ವಾತಾವರಣದಿಂದ ಎಳವೆಯಲ್ಲೇ ಭಜನಾ ಸಂಸ್ಕøತಿಯೆಡೆಗೆ ಆಕರ್ಷಣೆ. ಒಂದೂವರೆ ದಶಕದ ಹಿಂದೆ ಇವರು ಧ್ವನಿತಟ್ಟೆಗಾಗಿ ಹಾಡಿದ "ಕಣ್ಣಿನೊಳಗೆ ನೋಡೋ.., ತಿರುಪಟತಿ ವೆಂಕಟರಮಣಾ." ಸಿಡಿಗಳು ದಾಖಲೆಯ 5ಲಕ್ಷಕ್ಕೂ ಅಧಿಕ ಪ್ರತಿಗಳು ಮಾರಾಟವಾದದ್ದು, ಮನೆ ಮಾತಾದದ್ದು ಇತಿಹಾಸ. ಸುಮಾರು 50ರಷ್ಟು ಧ್ವನಿತಟ್ಟೆ, ಒಂದು ಸಾವಿರಕ್ಕೂ ಅಧಿಕ ವೇದಿಕೆಗಳಲ್ಲಿ ಕಾರ್ಯಕ್ರಮಗಳನ್ನಿತ್ತಿರುವ ಅವರು ಹರಿಭಜನಾ ಸಂಸ್ಕøತಿಯ ಪುನರುತ್ತೇಜನದ ಧ್ಯೇಯದಿಂದ, ದಾಸಸಾಹಿತ್ಯ ಪ್ರಚಾರಕ್ಕಾಗಿ ಗಡಿನಾಡಿನುದ್ದಗಲ ದಾಸಸಂಕೀರ್ತನಾ ಅಭಿಯಾನ ನಡೆಸಿದ್ದಾರೆ. ಜತೆಯಲ್ಲೇ ಸತ್ಸಂಗಗಳನ್ನು ನೀಡಿದ್ದಾರೆ. ಇತ್ತೀಚೆಗಷ್ಟೇ ದೇಶದಲ್ಲೇ ಮೊದಲಬಾರಿಗೆ ಭಜನಾ ಅಭ್ಯುದಯಕ್ಕೆ ಟ್ರಸ್ಟ್ ರೂಪಿಸಿದ್ದಾರೆ. ತನ್ನ ಗಾನಯಾನದ ಬದುಕನ್ನು ದಾಸಸಾಹಿತ್ಯ ಮತ್ತು ಭಜನಾ ಕೈಂಕರ್ಯಕ್ಕೆ ಮೀಸಲಿಟ್ಟ ಇವರೀಗ ಸ್ವಯಂ ಪ್ರಚೋದನೆಯಿಂದ ತಾನೇ ಹರಿದಾಸರಾಗುವುದು ಆಧ್ಯಾತ್ಮಿಕ ಕ್ಷೇತ್ರದ ಕೌತುಕ, ಅಚ್ಚರಿಯ ಬೆಳವಣಿಗೆ.
ಫೆ. 2ರಂದು ಬೆಳಿಗ್ಗೆ 7ರಿಂದ 9ರ ನಡುವನ ಸುಮೂಹರ್ತದಲ್ಲಿ ಉಡುಪಿ ಶ್ರೀಮಠದ ಸರ್ವಜÐ ಪೀಠದಲ್ಲಿ ಪಲಿಮಾರು ಶ್ರೀಗಳವರಿಂದ ದೀಕ್ಷಾವಿಧಿ ಪ್ರದಾನವಾಗಲಿದೆ. ಬಳಿಕ ಶಿಷ್ಯಮಂಡಳಿಗಳ ಭಜನೆ, ಸಂಕೀರ್ತನೆ, ಸತ್ಸಂಗ ಮತ್ತು ಅಪರಾಹ್ನ ಸಭೆ, ಗುರುವಂದನೆ ಜರಗಲಿದೆ. ಕರಾವಳಿಯಲ್ಲೊಬ್ಬರು ಔದ್ಯೋಗಿಕ ಹರಿದಾಸ ದೀಕ್ಷಾವಿಧಿ ಸ್ವೀಕರಿಸುವುದು ಇದೇ ಪ್ರಥಮವಾದುದರಿಂದ ಹರಿದಾಸ ಸಾಹಿತ್ಯ ವಿಸ್ತರಣೆ-ಪ್ರಚಾರದಲ್ಲಿ ಇದು ಪ್ರಾಮುಖ್ಯತೆ ಪಡೆದಿದೆ. ಏಕೆಂದರೆ ಹರಿದಾಸ ಎನ್ನುವುದು ಹರಿಕತೆ ಮಾಡುವವರೋ, ಸಂಕೀರ್ತನೆ ಹಾಡುವವರೋ ಬರಿದೇ ಇರಿಸುವ ಹೆಸರಲ್ಲ. ಅದೊಂದು ಆಶ್ರಮಧರ್ಮ. ಅಲ್ಲಿ ನುಡಿದಂತೆಯೇ ನಡೆಯಬೇಕು. ಹರಿಸರ್ವೋತ್ತಮತ್ವವನ್ನು ಸಾರುತ್ತಾ, ಅದಕ್ಕಾಗಿಯೇ ಬದುಕುತ್ತಾ ಜೀವನ ಸಂಸ್ಕಾರ ಪಾಲಿಸಬೇಕು. ಐಹಿಕದ ಸುಖ, ಭೋಗ, ಭಾಗ್ಯಗಳನ್ನೆಲ್ಲಾ ತ್ಯಜಿಸಿ ಹರಿಧರ್ಮದ ಸತ್ಕರ್ಮಗಳ ವ್ರತನಿಷ್ಠ ಜೀವನಪದ್ಧತಿ ಅನುಸರಿಸಬೇಕು. ಇದು ಸಂತಪದವಿಯ ಕಡೆಗಿನ ಜೀವನ್ಮುಕ್ತಿಯ ನಡಿಗೆ.
ಹೀಗಾಗಿ "ದಾಸನಗು ವಿಶೇಷನಾಗು" ಎಂಬ ಉಕ್ತಿಯಂತೆಯೇ ರಾಮಕೃಷ್ಣ ಕಾಟುಕುಕ್ಕೆಯವರು ಈಗ ವಿಶೇಷವಾಗುತ್ಯಿದ್ದಾರೆ. ಕಾಸರಗೋಡು ಸಹಿತ ಗಡಿನಡಿನ ಗಡಿಯಲ್ಲಿ ಅವರಿಗೆ 2ಸಾವಿರಕ್ಕೂ ಅಧಿಕ ಭಜನಾರ್ಥಿ ಶಿಷ್ಯರಿದ್ದಾರೆ. 150ಕ್ಕೂ ಅಧಿಕ ಶಿಷ್ಯಮಂಡಳಿ ಭಜನಾ ಗುಂಪುಗಳಿವೆ. ಹರಿದಾಸ ಸಂಕೀರ್ತನೆಯಿಂದ ಪ್ರಚೋದನೆ ಪಡೆದ ಸಹಸ್ರಾರು ಅಭಿಮಾನಿಗಳಿದ್ದಾರೆ. ಈ ಸರ್ವ ಬಳಗದ ಬೆಂಬಲದ ಕೃಪಾಶ್ರಯದಲ್ಲಿ ಇನ್ನುಳಿದ ಜೀವನವನ್ನಿಡೀ ಹರಿಸರ್ವೋತ್ತಮತ್ವದ ಹರಿದಾಸ ಸಾಹಿತ್ಯದ ಪ್ರಸಾರ-ಪ್ರಚಾರಕ್ಕೆ ಮೀಸಲಿಡುವ ಅವರ ನಿರ್ಧಾರ ವರ್ತಮಾನದ ಅತಿ ದೊಡ್ಡ ಧಾರ್ಮಿಕ ಕ್ರಾಂತಿ. ಗಡಿನಾಡು ಕಾಸರಗೋಡು ಕಲಿಯುಗದಲ್ಲಿ ದಾಸ ಸಾಹಿತ್ಯಕ್ಕೆ ನೀಡುವ ಮಹೋನ್ನತ ಕೊಡುಗೆ.
ಬರಹ: ಎಂ.ನಾ.ಚಂಬಲ್ತಿಮಾರ್