ಕಾಸರಗೋಡು: ಪ್ರಕೃತಿಯೇ ಹೀಗೆ. ಒಂದಿಲ್ಲೊಂದು ವಿಚಿತ್ರಗಳು, ಕುತೂಹಲಗಳು ಕಾಣಸಿಗುತ್ತವೆ. ಇದೀಗ ಸಮುದ್ರದಿಂದ ಮುಳ್ಳು ಹಂದಿಯ ರೂಪದ ಮೀನು ಪತ್ತೆಯಾಗಿದ್ದು, ಕುತೂಹಲ ಮೂಡಿಸಿದೆ.
ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ ಕಾಂಞಂಗಾಡ್ ಪೂಂಜಾವಿ ಕಡಪ್ಪುರದಲ್ಲಿ ಬಲೆಗೆ ಅಪರೂಪದ ಮೀನೊಂದು ಬಿದ್ದಿದೆ. ಈ ಮೀನು ಮುಳ್ಳು ಹಂದಿಯ ರೂಪದಲ್ಲಿದೆ. ಮೀನಿನ ದೇಹ ಪೂರ್ತಿ ಮುಳ್ಳುಹಂದಿಯಂತೆ ಮುಳ್ಳುಗಳಿವೆ. ಅಲ್ಲದೆ ಕಪ್ಪು ಚುಕ್ಕಿಗಳಿವೆ.
ಈ ಮೀನಿನ ಇನ್ನೊಂದು ವಿಶೇಷ ವೆಂದರೆ ಚೂಪಾದ ಹಲ್ಲುಗಳು. ಇದರ ಬಾಯಿಗೆ ಕೊಟ್ಟ ವಸ್ತುಗಳನ್ನು ಕೆಲವೇ ನಿಮಿಷಗಳಲ್ಲಿ ತಿನ್ನುತ್ತಿತ್ತು ಎಂದು ಮೀನು ಕಾರ್ಮಿಕರಾದ ಸುರೇಂದ್ರನ್, ವೇಣು, ಉದಯನ್ ಅವರು ತಿಳಿಸಿದ್ದಾರೆ. ಈ ಮೀನು ಆಹಾರಕ್ಕೆ ಯೋಗ್ಯವೇ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲದಿರುವ ಕಾರಣದಿಂದ ಮೀನನ್ನು ಸಮುದ್ರಕ್ಕೆ ಬಿಡಲಾಯಿತು ಎಂದು ಸುರೇಂದ್ರನ್ ಹೇಳಿದ್ದಾರೆ.