ನವದೆಹಲಿ: ನಿಕೋಟಿನ್ ಸೇವನೆ ಮೇಲೆ ಸಂಪೂರ್ಣ ಕಡಿವಾಣ ಹಾಕುವ ನಿಟ್ಟಿನಲ್ಲಿ ಕೇಂದ್ರ ಸಚಿವ ಸಂಪುಟ ಮಹತ್ವದ ನಿರ್ಧಾರ ಕೈಗೊಂಡಿದೆ. ಎಲ್ಲಾ ಬಗೆಯ ಇ-ಸಿಗರೇಟ್ ಗಳನ್ನು ಡ್ರಗ್ಸ್ ಎಂದು ಪರಿಗಣಿಸಿದ್ದು, ಸಂಪೂರ್ಣ ನಿಷೇಧ ಹೇರುವ ಮಸೂದೆ ಮಂಡನೆಯಾಗಿದ್ದು, ಸಂಸತ್ತಿನ ಮೇಲ್ಮನೆಯಲ್ಲಿ ಸಮ್ಮತಿ ಸಿಕ್ಕಿದೆ. ಇ-ಸಿಗರೇಟು ಉತ್ಪಾದನೆ, ಆಮದು/ರಫ್ತು, ಮಾರಾಟ, ಶೇಖರಣೆ, ಜಾಹೀರಾತು ನೀಡಿಕೆ, ಬಳಕೆ ಎಲ್ಲವನ್ನು ನಿಷೇಧಿಸಲಾಗಿದೆ. ಎಲೆಕ್ಟ್ರೋನಿಕ್ ನಿಕೋಟಿನ್ ಡೆಲಿವರಿ ಸಿಸ್ಟಮ್ಸ್ (ಇಓಆS) ಮೂಲಕ ಸಿಗುವ ನಿಕೋಟಿನ್ ಸೇವನೆ ಸಾಧನಗಳನ್ನು ನಿಷೇಧಿಸುವಂತೆ ಆರೋಗ್ಯ ಇಲಾಖೆ ಈಗಾಗಲೇ ಶಿಫಾರಸು ಕಳಿಸಿತ್ತು. ಇದನ್ನು ಪರಿಗಣಿಸಿ, ಕೇಂದ್ರ ಬಜೆಟ್ ಮಂಡನೆ ವೇಳೆ ಘೋಷಣೆ ಮಾಡಬೇಕಾಗಿತ್ತು. ಆದರೆ, ಸ್ವಲ್ಪ ತಡವಾಗಿದ್ದು, ಈಗ ಸಂಪೂರ್ಣ ನಿಷೇಧದ ಆದೇಶ ಜಾರಿಯಾಗಲಿದೆ. ಇ ಸಿಗರೇಟ್ ನಿಷೇಧ ಕಾಯ್ದೆ 2019ಗೆ ರಾಜ್ಯಸಭೆಯಲ್ಲಿ ಧ್ವನಿಮತದ ಮೂಲಕ ಅಂಗೀಕರಿಸಲಾಯಿತು. ಕಳೆದ ತಿಂಗಳು ಲೋಕಸಭೆಯಲ್ಲಿ ಅಂಗೀಕಾರವಾಗಿತ್ತು.
"ಸಿಗರೇಟು ಹಾಗೂ ಇತರೆ ತಂಬಾಕು ಉತ್ಪನ್ನ ಕಾಯ್ದೆಯಡಿಯಲ್ಲಿ ಕೇಂದ್ರ ಸರ್ಕಾರವು ಈ ಉತ್ಪನ್ನಗಳನ್ನು ನಿಷೇಧಿಸಲು ಸಾಧ್ಯವಿಲ್ಲ. ಮಾರಾಟದಲ್ಲಿ ನಿಯಂತ್ರಣ ಸಾಧಿಸಬಹುದು ಅಷ್ಟೇ. ಕಾನೂನಿನ ತೊಡಕಿನ ನಡುವೆ ಇ ಸಿಗರೇಟು ಮೇಲೆ ನಿಷೇಧ ಹೇರಲು ಸರ್ಕಾರ ಮುಂದಾಗಿತ್ತು. ಹೀಗಾಗಿ, ಕಾನೂನಿಗೆ ಅಗತ್ಯ ತಿದ್ದುಪಡಿ ಮಾಡಿ, ಮಸೂದೆ ಮಂಡನೆ ಮಾಡಲಾಗಿದೆ. ಇದರದಲ್ಲಿ ಯಾವುದೇ ದುರುದ್ದೇಶವಿಲ್ಲ,ತಂಬಾಕು ಸಂಪೂರ್ಣ ನಿಷೇಧವಾದರೆ ಅತ್ಯಂತ ಸಂತೋಷ ಪಡುವ ವ್ಯಕ್ತಿ ನಾನಾಗಿರುತ್ತೇನೆ" ಎಂದು ಆರೋಗ್ಯ ಸಚಿವ ಹರ್ಷ್ ವರ್ಧನ್ ಹೇಳಿದರು.7,700ಕ್ಕೂ ಅಧಿಕ ಮಾದರಿಯಲ್ಲಿ ಲಭ್ಯ ತಂಬಾಕು ಎಲೆಗಳನ್ನು ಸಂಪೂರ್ಣವಾಗಿ ಸುಡದೆ ಬಿಸಿ ಮುಟ್ಟಿಸಿ, ದ್ರವ ರೂಪದ ನಿಕೋಟಿನ್ ಅವಿಯನ್ನು ಸೇವಿಸುವ ಸಾಧನಗಳು ಹೆಚ್ಚು ಜನಪ್ರಿಯವಾಗಿವೆ. ಇಂಥ ಸಾಧನಗಳಿಗೆ ಯಾವುದೆ ಲೈಸನ್ಸ್ ಇಲ್ಲ, ಯುವ ಜನಾಂಗದ ದಿಕ್ಕು ತಪ್ಪಿಸಲಾಗುತ್ತಿದೆ, ಸುಮಾರು 460ಕ್ಕೂ ಅಧಿಕ ಇ ಸಿಗರೇಟು ಬ್ರ್ಯಾಂಡ್ ಗಳು ಭಾರತದಲ್ಲಿವೆ. ಸರಿ ಸುಮಾರು 7,700ಕ್ಕೂ ಅಧಿಕ ಮಾದರಿಯಲ್ಲಿ ಲಭ್ಯವಿದೆ.
ನಿಯಮ ಉಲ್ಲಂಘಿಸಿದವರಿಗೆ ಜೈಲು ಶಿಕ್ಷೆ :
ನಿಯಮ ಉಲ್ಲಂಘಿಸಿದವರಿಗೆ ಮೊದಲ ಬಾರಿಗೆ 1 ಲಕ್ಷ ರೂ. ದಂಡ, ಒಂದು ವರ್ಷ ಜೈಲು ಶಿಕ್ಷೆ ಅಥವಾ ಎರಡನ್ನೂ ವಿಧಿಸಬಹುದು. ಎರಡನೇ ಬಾರಿಗೆ ನಿಯಮ ಉಲ್ಲಂಘಿಸಿದವರೆಗೆ 5 ಲಕ್ಷ ರೂ. ದಂಡ, 3 ವರ್ಷದವರೆಗೆ ಜೈಲುಶಿಕ್ಷೆ ಅಥವಾ ದಂಡ ಸಹಿತ ಸೆರೆಮನೆವಾಸ ವಿಧಿಸಬಹುದು.
ಇ ಸಿಗರೇಟು ಉತ್ಪನ್ನ ಎಲ್ಲವೂ ನಿಷೇಧ:
ಇ ಸಿಗರೇಟು ಉತ್ಪನ್ನಗಳನ್ನು ಡ್ರಗ್ಸ್ ಹಾಗೂ ಕಾಸ್ಮೆಟಿಕ್ಸ್ ಕಾಯ್ದೆ 1940(ಡಿಸಿಎ) ಸೆಕ್ಷನ್ 3 (ಬಿ) ಅಡಿಯಲ್ಲಿ ತರಲು ಸಾಧ್ಯವಾಗಿಲ್ಲ. ಸೆಕ್ಷನ್ 26 (ಎ) ಅಡಿಯಲ್ಲಿ ನಿಷೇಧಕ್ಕೆ ಯತ್ನಿಸಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದರು. ಅದರಂತೆ ಅಗತ್ಯ ತಿದ್ದುಪಡಿ ತರಲಾಗಿದೆ. ಪಂಜಾಬ್, ಹರ್ಯಾಣ ಹಾಗೂ ಚಂಡೀಗಢದಲ್ಲಿ ಮಾತ್ರ ಇ ಸಿಗರೇಟ್, ಇ-ಶೀಶಾ, ಇ ನಿಕೋಟಿನ್, ಪರಿಮಳ ಭರಿತ ಹುಕ್ಕಾ ಎಲ್ಲದರ ಮೇಲೆ ನಿಷೇಧವಿದೆ.