ಬದಿಯಡ್ಕ: ದೇಶದಲ್ಲಿ ದಲಿತರ ಮೀಸಲಾತಿಗೆ ಹಂತ ಹಂತವಾಗಿ ಕತ್ತರಿ ಬೀಳುತ್ತಿರುವುದು ವಿಷಾದನೀಯ. ಅನುದಾನಿತ ವಲಯಗಳಲ್ಲಿ ಮೀಸಲಾತಿ ಜಾರಿಗೊಳಿಸಲು ಸರ್ಕಾರ ಮೀನಮೇಷ ಎಣಿಸುವುದು ಖೇದಕರ ಎಂದು ಕುಂಬ್ಡಾಜೆ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಆನಂದ ಕೆ.ಮವ್ವಾರು ಅಭಿಪ್ರಾಯಪಟ್ಟರು.
ಅಂಬೇಡ್ಕರ್ ವಿಚಾರ ವೇದಿಕೆಯ ವತಿಯಿಂದ ಬಾರಡ್ಕ ಅಂಬೇಡ್ಕರ್ ನಗರದಲ್ಲಿ ಆಯೋಜಿಸಲಾದ ಡಾ. ಬಿ.ಆರ್.ಅಂಬೇಡ್ಕರ್‍ರ 63ನೇ ಪರಿನಿರ್ವಾಣ ದಿನ ಕಾರ್ಯಕ್ರಮದಲ್ಲಿ ಅಂಬೇಡ್ಕರ್‍ರ ಭಾವಚಿತ್ರಕ್ಕೆ ಹಾರಾರ್ಪಣೆಗೈದು ಅವರು ಮಾತನಾಡಿದರು.
ಮಧೂರು ಶ್ರೀ ಮದರು ಮಹಾಮಾತೆ ಮೊಗೇರ ಸಮಾಜದ ಅಧ್ಯಕ್ಷ ವಸಂತ ಅಜಕ್ಕೋಡು ಅಧ್ಯಕ್ಷತೆ ವಹಿಸಿ ಮಾತನಾಡಿ, ಮೇಲ್ವರ್ಗದ ಇತಿಹಾಸ ಪುರುಷರಿಗೆ ಲಭಿಸುವ ಮಾನ್ಯತೆ ದಲಿತ ನಾಯಕರಿಗೆ ದೊರಕದಿರುವುದು ದೌರ್ಭಾಗ್ಯಕರ ಎಂದರು. ಮಾಜಿ ಬ್ಲಾಕ್ ಪಂಚಾಯತಿ ಸದಸ್ಯ ಚಂದ್ರಶೇಖರ ಬಿ., ಬದಿಯಡ್ಕ ಗ್ರಾಮ ಪಂಚಾಯತಿ ಸದಸ್ಯೆ ಶಾಂತಾ ಬಾರಡ್ಕ, ಅಂಬೇಡ್ಕರ್ ವಿಚಾರ ವೇದಿಕೆಯ ಸ್ಥಾಪಕ ಸದಸ್ಯ ನಾರಾಯಣ ಬಾರಡ್ಕ, ನಿವೃತ್ತ ಗ್ರಾಮಾಧಿಕಾರಿ ಕೃಷ್ಣ ದರ್ಭೆತ್ತಡ್ಕ, ರಾಮ ಪಟ್ಟಾಜೆ, ವಸಂತ ಬಾರಡ್ಕ, ಸುರೇಶ್ ಅಜಕ್ಕೋಡು, ಸತ್ಯರಾಜ್ ಬಾರಡ್ಕ ಉಪಸ್ಥಿತರಿದ್ದು ಮಾತನಾಡಿದರು.
ಈ ಸಂದರ್ಭದಲ್ಲಿ ದ.ಕನ್ನಡ ಜಿಲ್ಲೆಯ ಮೂಡಬಿದ್ರೆ ತಾಲೂಕಿನ ಕಡಂದಲೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಷಷ್ಠಿ ಮಹೋತ್ಸವದ ಕರ್ತವ್ಯಕ್ಕೆ ತೆರಳಿದ ಮಹಿಳಾ ಪೆÇಲೀಸ್ ಪೇದೆಯನ್ನು ದಲಿತೆ ಎಂಬ ಕಾರಣಕ್ಕೆ ದೇವಸ್ಥಾನದಿಂದ ಹೊರಗೆ ಕಳುಹಿಸಿದ ಅಮಾನವೀಯ ಘಟನೆಯನ್ನು ಒಕ್ಕೊರಲಿನಿಂದ ಖಂಡಿಸಲಾಯಿತು. ಅಂಬೇಡ್ಕರ್ ವಿಚಾರ ವೇದಿಕೆಯ ಸದಸ್ಯ ವಿಜಯ ಬಾರಡ್ಕ ಸ್ವಾಗತಿಸಿದರು. ಕಾರ್ಯದರ್ಶಿ ಸುಂದರ ಬಾರಡ್ಕ ವಂದಿಸಿದರು.