ಪೆರ್ಲ: ಜಲ ಸಂರಕ್ಷಣೆಯ ಪಣತೊಟ್ಟ 'ನೀರ ನೆಮ್ಮದಿಯತ್ತ ಪಡ್ರೆ' ಜಲಯೋಧರ ಕಾರ್ಯಪಡೆ ಕಳೆದ ಬೇಸಗೆಯಲ್ಲಿ ಅಭೂತ ಪೂರ್ವ ಎಂಬಂತೆ ಬತ್ತಿ ಬರಡಾಗಿದ್ದ ಪಡ್ರೆಯ ತೋಡುಗಳ ಪುನರುದ್ಧಾರ, ತೋಡಿನಲ್ಲಿ ವರ್ಷ ಪೂರ್ತಿ ನೀರು ಹರಿಸುವ ಕ್ರಿಯಾ ಯೋಜನೆಯೊಂದಿಗೆ ಜಲಾಂದೋಲನಕ್ಕೆ ಧುಮುಕಿದ್ದು ಭಾನುವಾರ ಪಡ್ಪು ಪೆÇಯ್ಯೆ ತೋಡಿನಲ್ಲಿ ನಾಲ್ಕು ಸರಣಿ ಕಟ್ಟಗಳನ್ನು ಕಟ್ಟುವ ಮೂಲಕ 'ಕಟ್ಟ ಕಟ್ಟುವ ಹಬ್ಬ' ಬೃಹತ್ ಜಲಕ್ರಾಂತಿಗೆ ಹೊಸ ಮುನ್ನುಡಿ ಬರೆದಿದ್ದಾರೆ.
ಸ್ವರ್ಗ ತೋಡಿನ ಉಗಮ ಸ್ಥಾನ ಕಿಂಞಣಮೂಲೆಯಿಂದ ಅಜಕ್ಕಳ ಮೂಲೆ ವರೆಗೆ ಹಾಗೂ ಪಡ್ಪುವಿನಿಂದ ಪೆÇಯ್ಯೆ ವರೆಗಿನ ತೋಡುಗಳಲ್ಲಿ ಈ ಹಿಂದೆ 40ರಿಂದ 48ರಷ್ಟು ಕಟ್ಟಗಳನ್ನು ಕಟ್ಟಲಾಗುತ್ತಿದ್ದು.ಹೆಚ್ಚಿನ ಕೃಷಿಕರು ಕಟ್ಟಗಳಲ್ಲಿ ಸಂಗ್ರಹವಾದ ನೀರನ್ನೇ ಆಶ್ರಯಿಸುತ್ತಿದ್ದರು. ಶ್ರಮಜೀವನದಿಂದ ವಿಮುಖರಾದ ಕೃಷಿಕರು ಕೊಳವೆ ಬಾವಿಯತ್ತ ಮಾರುಹೋದಂತೆ ಕಠಿಣ ಹಾಗೂ ಜಾಣ್ಮೆಯ ಕೆಲಸ ಕಟ್ಟ ನಿರ್ಮಾಣದಿಂದ ದೂರ ಸರಿದಿದ್ದರು.ಅಗತ್ಯವನ್ನೂ ಮೀರಿ ಕೊಳವೆ ಬಾವಿ ಕೊರೆದಂತೆ ಕಟ್ಟ ನಿರ್ಮಾಣವನ್ನೇ ಮರೆತಿದ್ದರು.ಕಳೆದ ವರ್ಷ ತೋಡಿನಲ್ಲಿ ಕಟ್ಟಗಳ ಸಂಖ್ಯೆ 12ಕ್ಕೆ ಇಳಿದಿತ್ತು.
ಕಟ್ಟನಿರ್ಮಾಣವನ್ನೇ ಹಬ್ಬವಾಗಿಸಿ ಎರಡೂ ತೋಡುಗಳಿಗೆ ಮೂರರಿಂದ ನಾಲ್ಕು ಡಜನ್ ಸರಣಿ ಕಟ್ಟಗಳನ್ನು ಕಟ್ಟುವ ಪಣತೊಟ್ಟ ಪಡ್ರೆಯ ಜಲಯೋಧರ ಜಲ ಆಂದೋಲನಕ್ಕೆ ಸ್ಥಳೀಯರು ಹಾಗೂ ನೆರೆಯ ಕರ್ನಾಟಕದ ಬೆಟ್ಟಂಪಾಡಿ ಕಾಲೇಜು ಎನ್ನೆಸ್ಸೆಸ್ ವಿದ್ಯಾರ್ಥಿಗಳು ಸಾಥ್ ನೀಡಿದ್ದಾರೆ.ಪಡ್ಪು ಸಜಂಗದ್ದೆ ನಡುವೆ ನಾಲ್ಕು ಸರಣಿ ಕಟ್ಟ ಕಟ್ಟುವ ಮೂಲಕ ಪಡ್ರೆಯಲ್ಲಿ ಉತ್ಸವದ ಕಳೆ ಮೂಡಿಸಿದ್ದಾರೆ.
ಜಗದೀಶ್ಚಂದ್ರ ಕುತ್ತಾಜೆ ಅವರಿಂದ ಮಾಹಿತಿ:
ಬೆಟ್ಟಂಪಾಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಎನ್ನೆಸ್ಸೆಸ್ ವಿದ್ಯಾರ್ಥಿಗಳು ಯೋಜನಾಧಿಕಾರಿ ಹರಿಪ್ರಸಾದ್ ಅವರೊಂದಿಗೆ ಕಟ್ಟ ಕಟ್ಟುವ ಹಬ್ಬದಲ್ಲಿ ಭಾಗವಹಿಸಿದ್ದಾರೆ.ಪ್ರಗತಿಪರ ಕೃಷಿಕ, ಕಟ್ಟಗಳ ತಜ್ಞ ಜಗದೀಶ್ಚಂದ್ರ ಕುತ್ತಾಜೆ ಮರಳು ಚೀಲ ಕಟ್ಟ, ಅರಿಪ್ಪೆ ಕಟ್ಟ, ಫೈಬರ್ ಶೀಟ್ ಕಟ್ಟಗಳ ವಿಧ ಹಾಗೂ ನಿರ್ಮಾಣದ ಮಾಹಿತಿ ನೀಡಿದ್ದಾರೆ.
ಕಟ್ಟ ಕಟ್ಟುವ ಹಬ್ಬ- ಮಣ್ಣು, ನೀರಲ್ಲಿ ಆಟ; ಮೊದಲ ದಿನ ನಾಲ್ಕು ಸರಣಿ ಕಟ್ಟ ನಿರ್ಮಾಣ:
ನೀರ ನೆಮ್ಮದಿಯತ್ತ ಪಡ್ರೆ ಸಂಘಟನೆ ಅಧ್ಯಕ್ಷ ಶ್ರೀಹರಿ ಎಸ್.ಸಜಂಗದ್ದೆ ಕಟ್ಟ ನಿರ್ಮಾಣದ ಪೂರ್ವಬಾವಿಯಾಗಿ ತೋಡಿನ ಬಳಿ ಮಣ್ಣು ಸಂಗ್ರಹಿಸಿ ರಾಶಿ ಹಾಕಿ ಹುಳಿ ಬರಿಸಿದ್ದರು.ವಿದ್ಯಾರ್ಥಿನಿಯರು ಹುಳಿ ಬರಿಸಿದ ಮಣ್ಣನ್ನು ಚೆನ್ನಾಗಿ ಕಲಸಿ ಉಂಡೆಯಾಗಿಸಿ ಕಟ್ಟ ನಿರ್ಮಾಣಕ್ಕೆ ಮುಂದಾಗಿದ್ದಾರೆ.ವಿದ್ಯಾರ್ಥಿಗಳು ತೋಡಿನಲ್ಲಿದ್ದ ಉಂಡೆ ಕಲ್ಲುಗಳನ್ನು ಸಂಗ್ರಹಿಸಿ ತಡೆ ನಿರ್ಮಿಸಿದ್ದಾರೆ.ಪಡ್ಪು ತೋಡಿನ ಆದಿ ಭಾಗದಲ್ಲಿಮರಳು ಚೀಲದ ಕಟ್ಟ, ಸಜಂಗದ್ದೆಯಲ್ಲಿ ಅಡಕೆ ಮರದ ತುಂಡುಗಳು, ಹುಳಿ ಬರಿಸಿದ ಮಣ್ಣನ್ನು ಬಳಸಿ ಅರಿಪ್ಪೆ ಕಟ್ಟ, ಫೈಬರ್ ಶೀಟ್ ಒಟ್ಟು ನಾಲ್ಕು ಸರಣಿ ಕಟ್ಟ ನಿರ್ಮಿಸಲಾಗಿದೆ.ಕಟ್ಟ ನಿರ್ಮಾಣದ ಬಿಡುವಿನ ವೇಳೆ ಕಣ್ಣು ಮುಚ್ಚಿ ಅಡಕೆ ಮರದ ಕಾಲ್ಸೇತುವೆ ದಾಟುವ ಸಾಹಸದ ಆಟವಾಡಿದ್ದಾರೆ.
ಎಣ್ಮಕಜೆ ಪಂಚಾಯಿತಿ ಉಪಾಧ್ಯಕ್ಷ ಅಬೂಬಕ್ಕರ್ ಸಿದ್ದಿಕ್ ಖಂಡಿಗೆ ಅವರೊಂದಿಗೆ ಸಂದರ್ಶನ:
ಎನ್ನೆಸ್ಸೆಸ್ ಘಟಕದ ನಾಯಕಿ ಕಾವ್ಯ ಎಸ್. ಕಟ್ಟ ನಿರ್ಮಾಣದ ಹಬ್ಬಕ್ಕೆ ಆಗಮಿಸಿದ ಎಣ್ಮಕಜೆ ಪಂಚಾಯಿತಿ ಉಪಾಧ್ಯಕ್ಷ ಅಬೂಬಕ್ಕರ್ ಸಿದ್ದಿಕ್ ಖಂಡಿಗೆ ಅವರ ಸಂದರ್ಶನ ನಡೆಸಿ ಮಾಹಿತಿ ಪಡೆದಿದ್ದಾರೆ.ಸ್ವಯಂ ಹೈನುಗಾರರೂ, ಉದ್ಯಮಿಯೂ, ಸಾಮಾಜಿಕ ಕಾರ್ಯಕರ್ತನೂ ಆಗಿರುವ ಅಬೂಬಕ್ಕರ್ ಸಿದ್ಧಿಕ್ 150 ದನಗಳು, 50ರಷ್ಟು ಕರುಗಳನ್ನು ಸಾಕುತ್ತಿದ್ದಾರೆ.ಸ್ವಯಂ ಪಶು ಆಹಾರ ತಯಾರಿ ಘಟಕ, ಅಕ್ಕಿ, ಎಣ್ಣೆ ಮಿಲ್ಲುಗಳ ಗಿರಣಿ ಹೊಂದಿರುವ ಅವರು ಮಕ್ಕಳಲ್ಲಿ ಸಾಮಾಜಿಕ ಕಾಳಜಿಯ ಬಗ್ಗೆ ಅರಿವು ಮೂಡಿಸಿದ್ದಾರೆ.ಕಟ್ಟ ನಿರ್ಮಾಣದ ಅಗತ್ಯದ ಮನವರಿಕೆ ಮಾಡಿಸಿದ್ದಾರೆ.
ಗಣ್ಯರ ಉಪಸ್ಥಿತಿ:
ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷೆ ಶಾರದಾ ವೈ., ಜಲತಜ್ಞ ಶ್ರೀಪಡ್ರೆ, ಸುಧಾರಿತ ಕಟ್ಟಗಳ ಪಾಲುದಾರ ಕೃಷಿಕ ಡಾ.ವೇಣು ಕಳೆಯತ್ತೋಡಿ, ಹಿರಿಯ ಪತ್ರಕರ್ತ, ನಿವೃತ್ತ ಉಪನ್ಯಾಸಕ ಎಸ್.ನಿತ್ಯಾನಂದ ಪಡ್ರೆ, ಪುತ್ತೂರು ವಿವೇಕಾನಂದ ಕಾಲೇಜು ಸ್ನಾತಕೋತ್ತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗ ಸಂಯೋಜಕ ರಾಕೇಶ್ ಕುಮಾರ್ ಕಮ್ಮಜೆ, ಉಪನ್ಯಾಸಕ ಭರತ್ ರಾಜ್, 'ನೀನೆಪ' ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ಕೆ.ವೈ, ಸದಸ್ಯರಾದ ಶಿವ ಪ್ರಕಾಶ್ ಪಾಲೆಪ್ಪಾಡಿ, ಶ್ರೀಹರಿ ಭರಣೇಕರ್, ಶ್ರೀನಿವಾಸ ಸ್ವರ್ಗ, ಶೈಲಜ ದೇಲಂತರು, ಗೀತಾಲಕ್ಷ್ಮಿ ಪಾಲೆಪ್ಪಾಡಿ ಉಪಸ್ಥಿತರಿದ್ದರು.
ಅಭಿಮತ:
''ಕಟ್ಟ ಕಟ್ಟುವ ಹಬ್ಬ' ಪ್ರಕೃತಿ, ಪರಿಸರದ ಕಾಳಜಿ ಬೆಳೆಸಲು:
ಪೂರಕವಾಗಿದೆ.ಕಟ್ಟ ನಿರ್ಮಾಣದ ಜ್ಞಾನ ಲಬಿಸಿದೆ.ಮುಂದಿನ ಸೇವಾ ಶಿಬಿರಗಳಲ್ಲಿ ಕಟ್ಟ ನಿರ್ಮಾಣವನ್ನು ಭಾಗವಾಗಿಸಿ ಅನುಷ್ಠಾನ ಗೊಳಿಸುವ
ಆತ್ಮವಿಶ್ವಾಸ ಹೊಂದಿದ್ದೇವೆ'
ಹರಿಪ್ರಸಾದ್ ಎಸ್.
ಎನ್ನೆಸ್ಸೆಸ್ ಯೋಜನಾಧಿಕಾರಿ,ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜು
................................................................
'ಪಡ್ರೆಯ ಮಣ್ಣಿನಲ್ಲಿ ಭವ್ಯ ಸ್ವಾಗತ, ಸಜಂಗದ್ದೆ ಮನೆಯವರ ಪ್ರೀತಿ, ಆತಿಥ್ಯ ಅವಿಸ್ಮರಣೀಯ. ಜಗದೀಶ್ಚಂದ್ರ ಅವರು ಕಟ್ಟ ಕಟ್ಟುವ ರೀತಿ ಹಾಗೂ ವಿಧಾನಗಳ ಮಾಹಿತಿಯನ್ನು ಅಚ್ಚು ಕಟ್ಟಾಗಿ ವಿವರಿಸಿದ್ದಾರೆ.ಕಟ್ಟಗಳ ಮಹತ್ವ, ಜಲ ಸಂರಕ್ಷಣೆಯ ಅರಿವು ಲಭಿಸಿದೆ'
ಕಾವ್ಯ ಎಸ್.ಸಾಯ
ಎನ್ನೆಸ್ಸೆಸ್ ನಾಯಕಿ, ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜು
.....................................................................
ವಿಶೇಷ ಅಂಶ:
ಸರ್ಕಾರದದ ನೆರವನ್ನು ಅಪೇಕ್ಷಿಸದೆ ಜನರ ಸಹಭಾಗಿತ್ವದಲ್ಲಿ ತೋಡುಗಳ ಕಾಯಕಲ್ಪ, ಕಟ್ಟಗಳ ಮಹತ್ವವನ್ನು ಹೊಸ ತಲೆಮಾರಿಗೆ ಪರಿಚಯಿಸುವ ಉದ್ದೇಶದಿಂದ ಕಳೆದ ಒಂದು ವರ್ಷಕ್ಕೂ ಮೊದಲು ಜಲ ಸಂರಕ್ಷಣೆ ಚಟುವಟಿಕೆ ಪ್ರಾರಂಭಿಸಿದ ಕಾರ್ಯಪಡೆ ಜಲ ಸಾಕ್ಷರತೆಯೆಡೆಗಿನ ಪಯಣದಲ್ಲಿ ಬಹುದೂರ ಕ್ರಮಿಸಿದೆ.
'ನಮ್ಮ ನಡಿಗೆ ತೋಡಿನ ಕಡೆಗೆ' ಅಭಿಯಾನ ಆರಂಭಿಸಿ ಪಡ್ರೆಯ ಎರಡು ತೋಡುಗಳ ಸಮಗ್ರ ಅಧ್ಯಯನ ನಡೆಸಿ ಸ್ವರ್ಗ ತೋಡಿನ ಉಗಮ ಸ್ಥಾನ ಕಿಂಞಣ್ಣ ಮೂಲೆ ಬಳಿಯ ಸೈಪಂಗಲ್ಲು ಜಮೀನಿನಲ್ಲಿ 20,000 ಲೀ. ಸಾಮಥ್ರ್ಯದ ಮದಕ ರಚಿಸಿ ನೀರು ಇಂಗಿಸಲು ಸಫಲವಾಗಿದೆ.
'ಪಡ್ಪು ಛಲೋ' ಅಭಿಯಾನದ ಭಾಗವಾಗಿ ಪೆರ್ಲ ನಾಲಂದ ಕಾಲೇಜು ಎನ್ನೆಸ್ಸೆಸ್ ವಿದ್ಯಾರ್ಥಿಗಳು, ಸ್ಥಳೀಯರ ನೇತೃತ್ವದಲ್ಲಿ ಗುಡ್ಡೆಯ ಮೇಲಿನ ಸುರಂಗದಿಂದ ಹರಿಯುವ ನೀರನ್ನು ತಡೆದು ಇಂಗಿಸಲು ತಳ ಭಾಗದಲ್ಲಿ 10,000 ಲೀ.ಸಾಮಥ್ರ್ಯದ ಮದಕ ರಚಿಸಿ ಯಶಸ್ವಿಯಾಗಿದೆ.
ಊರಿನ ಹಲವು ಕಡೆ ಜಲ ಸಂರಕ್ಷಣೆ
ಮಾಹಿತಿ ಶಿಬಿರ ಏರ್ಪಡಿಸಿ ಜಲ ಮರುಪೂರಣದ ಪ್ರಾತ್ಯಕ್ಷಿಕೆ ನೀಡಿದೆ.ನಾನಾ ಪ್ರದೇಶಗಳಿಗೆ ಭೇಟಿ ನೀಡಿ ಜಲ ಚಟುವಟಿಕೆಗಳ ಮಾಹಿತಿ ಕಲೆ ಹಾಕಿದೆ.ತೋಡಿನಲ್ಲಿ ಸರಣಿ ಕಟ್ಟ ಕಟ್ಟಲು ಮಣ್ಣಿನ ಗುಣ ತಿಳಿಯುವ, ನೀರಿನ ಸೆಲೆ ಅಳೆಯುವ ಜ್ಞಾನ ಬೆಳೆಸಿ ಜನರಲ್ಲಿ ಮೇಲ್ಮೈ ನೀರಿನ ಮಟ್ಟ ಕಾಯ್ದು, ಅಂತರ್ಜಲ ಮಟ್ಟ ಹೆಚ್ಚಿಸುವ ಜಲ ಪ್ರಜ್ಞೆ ಬೆಳೆಸಿದ್ದಾರೆ.ಡಿಸೆಂಬರ್, ಹಾಗೂ ಜನವರಿ ತಿಂಗಳು ಕಟ್ಟ ನಿರ್ಮಾಣದ ಹಬ್ಬವಾಗಲಿದ್ದು ಈ ದಿನಗಳಲ್ಲಿ 40ರಿಂದ 48ರಷ್ಟು ಕಟ್ಟಗಳು ನಿರ್ಮಾಣವಾಗಲಿದೆ.