ಕಾಸರಗೋಡು: ಪೌರತ್ವ ತಿದ್ದುಪಡಿ ಕಾನೂನಿನ ವಿರುದ್ಧ ಪ್ರತಿಪಕ್ಷಗಳು ಮುಸ್ಲಿಂ ಸಮುದಾಯವನ್ನು ಹಾದಿತಪ್ಪಿಸುತ್ತಿರುವುದಾಗಿ ಬಿಜೆಪಿ ರಾಜ್ಯಸಮಿತಿ ಪ್ರಧಾನ ಕಾರ್ಯದರ್ಶಿ ಕೆ. ಶ್ರೀಕಾಂತ್ ತಿಳಿಸಿದ್ದಾರೆ. ಅವರು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾನೂನಿನ ಪ್ರಾಧಾನ್ಯತೆ ಜನರಿಗೆ ತಿಳಿಯಪಡಿಸುವ ನಿಟ್ಟಿನಲ್ಲಿ ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿ ವತಿಯಿಂದ ಕಾಸರಗೋಡು ಹೊಸ ಬಸ್‍ನಿಲ್ದಾಣ ವಠಾರದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಜನಜಾಗೃತಿ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಲೋಕಸಭೆ ಮತ್ತು ರಾಜ್ಯ ಸಭೆ ಏಕ ಕಂಠದಿಂದ ಮಂಜೂರಾತಿ ನೀಡಿ, ರಾಷ್ಟ್ರಪತಿ ಅಂಕಿತ ಹಾಕಿರುವ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಕೇರಳ ಸರ್ಕಾರ ಗೊತ್ತುವಳಿ ಮಂಡನೆಗೆ ಮುಂದಾಗುವ ಮೂಲಕ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಪ್ರಶ್ನಿಸಲು ಮುಂದಾಗಿರುವುದು ಖಂಡನೀಯ. ಕೇರಳದ ಪ್ರತಿಪಕ್ಷ ಮುಖಂಡ ರಮೇಶ್ ಚೆನ್ನಿತ್ತಲ ಇದಕ್ಕೆ ಬೆಂಬಲ ನೀಡಿರುವುದು ಆ ಪಕ್ಷದ ದೀವಾಳಿತನಕ್ಕೆ ಸಾಕ್ಷಿಯಾಗಿದೆ. ಆಡಳಿತ ಮತ್ತು ಪ್ರತಿಪಕ್ಷ ರಾಜ್ಯಪಾಲರ ಮೇಲೆ ಹಲ್ಲೆಗೆ ಯತ್ನಿಸಿದರೂ, ಕೈಕಟ್ಟಿ ಕುಳಿತಿರುವುದು ರಾಜ್ಯದ ಶಾಂತಿ ಸಉವ್ಯವಸ್ಥೆ ಹದಗೆಟ್ಟಿರುವುದಕ್ಕೆ ಸಾಕ್ಷಿಯಾಗಿದೆ ಎಂದು ತಿಳಿಸಿದರು.
ನರೇಂದ್ರ ಮೋದಿ ನೇತೃತ್ವದ ಒಂದನೇ ಎನ್‍ಡಿಎ ಸರ್ಕಾರ ಆಡಳಿತಕ್ಕೆ ಬರುವ ಮೊದಲು ಮುಸ್ಲಿಮರಲ್ಲಿ ಭೀತಿ ಹುಟ್ಟಿಸುವ ಮೂಲಕ ನಾನಾ ರೀತಿಯಲ್ಲಿ ಸುಳ್ಳು ಪ್ರಚಾರ ನಡೆಸಿದ್ದ ಸಿಪಿಎಂ, ಕಾಂಗ್ರೆಸ್ ಸಹಿತ ಪ್ರತಿಪಕ್ಷಗಳಿಗೆ ಪ್ರಧಾನಿ ನರೇಂದ್ರಮೋದಿ ಅವರು ಅಭಿವೃದ್ಧಿಯ ಮೂಲಕ ಉತ್ತರ ನೀಡಿದ್ದರು. ಎರಡನೇ ಬಾರಿಗೆ ಆಡಳಿತಕ್ಕೇರಿದ ಎನ್‍ಡಿಎ ಸರ್ಕಾರದ ವಿರುದ್ಧ ಸುಳ್ಳುಪ್ರಚಾರ ಮುಂದುವರಿಸಿರುವ ಪ್ರತಿಪಕ್ಷಗಳು, ಪೌರತ್ವ ತಿದ್ದುಪಡಿ ಕಾನೂನಿನ ಬಗ್ಗೆ ಅಲ್ಪಸಂಖ್ಯಾತರಲ್ಲಿ ಭಯದ ವಾತಾವರಣ ಉಂಟುಮಾಡುವುದರ ಜತೆಗೆ, ಹಿಂದೂ-ಮುಸ್ಲಿಮರನ್ನು ವಿಭಜಿಸಿ ಕಲಹ ಏರ್ಪಡುವಂತೆ ಮಾಡಲು ಯತ್ನಿಸುತ್ತಿದೆ. ಪೌರತ್ವ ತಿದ್ದುಪಡಿ ಕಾನೂನು ದೇಶದ ಯಾವೊಬ್ಬ ಮುಸ್ಲಿಂ ಪ್ರಜೆಗೂ ತೊಂದರೆಯುಂಟುಮಾಡದು ಎಂಬ ವಿಷಯವನ್ನು ಪ್ರಧಾನಿ ಪುನರಾವರ್ತಿಸಿದ್ದರೂ, ವೋಟ್‍ಬ್ಯಾಂಕ್ ರಾಜಕೀಯ ನಡೆಸುತ್ತಿರುವ ಪ್ರತಿಪಕ್ಷಗಳು ಮುಸ್ಲಿಮರನ್ನು ಬೀದಿಗಿಳಿದು ಹಿಂಸಾಚಾರದಲ್ಲಿ ತೊಡಗುವಂತೆ ಪ್ರೇರೇಪಿಸುತ್ತಿರುವು ಖಂಡನೀಯ. ಪ್ರತಿಪಕ್ಷಗಳ ಇಂತಹ ಕುಟಿಲ ತಂತ್ರಗಳಿಗೆ ಬಲಿಬೀಳದಿರುವಂತೆ ಅಲ್ಪಸಂಖ್ಯಾತರಿಗೆ ಮನವಿ ಮಾಡಿದರು.
ಬಿಜೆಪಿ ಜಿಲ್ಲಾ ಸಮಿತಿ ಅಧ್ಯಕ್ಷ ನ್ಯಾಯವಾದಿ ಕೆ. ಶ್ರೀಕಾಂತ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಮಿತಿ ಕಾರ್ಯದರ್ಶಿ ಎ.ವೇಲಾಯುಧನ್ ಪ್ರಾಸ್ತಾವಿಕ ಭಾಷಣ ಮಾಡಿದರು. ರಾಷ್ಟ್ರೀಯ ಸಮಿತಿ ಸದಸ್ಯ ಎಂ. ಸಂಜೀವ ಶೆಟ್ಟಿ, ರಾಜ್ಯ ಸಮಿತಿ ಉಪಾಧ್ಯಕ್ಷೆ ಪ್ರಮಿಳಾ ಸಿ.ನಾಯ್ಕ್, ಮುಖಂಡರಾದ ಕುಂಟಾರು ರವೀಶ ತಂತ್ರಿ, ವಿ. ಬಾಲಕೃಷ್ಣ ಶೆಟ್ಟಿ, ಪಿ.ಸುರೇಶ್‍ಕುಮಾರ್ ಶೆಟ್ಟಿ, ವಕೀಲ ಸದಾನಂದ ರೈ, ಸತ್ಯಶಂಕರ ಭಟ್, ಜನನಿ, ಪಿ.ಜಾನಕಿ ಪುಷ್ಪಾ ಅಮೆಕ್ಕಳ, ಸವಿತಾ ಟೀಚರ್, ಎ.ಕೆ ಕಯ್ಯಾರ್, ಚಂದ್ರನ್, ಕೆ.ವಿ ಮ್ಯಾಥ್ಯೂ ಮುಂತಾದವರು ಉಪಸ್ಥಿತರಿದ್ದರು.