ಮಂಬೈ: ಪೌರತ್ವ ಕಾಯ್ದೆ ಮುಸ್ಲಿಂ ಸಮುದಾಯಕ್ಕೆ ಅಪಾಯಕಾರಿಯಲ್ಲ. ಕಾಯ್ದೆಯನ್ನು ಹಿಂಪಡೆಯುವ ಮಾತೇ ಇಲ್ಲ ಎಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿಯವರು ಹೇಳಿದ್ದಾರೆ.
ಯಾವುದೇ ಕಾರಣಕ್ಕೂ ಪೌರತ್ವ ಕಾಯ್ದೆಯಿಂದ ಸರ್ಕಾರ ಹಿಂದಕ್ಕೆ ಸರಿಯುವುದಿಲ್ಲ. ಕಾಯ್ದೆ ಕುರಿತು ದೇಶದಲ್ಲಿ ಗೊಂದಲ ಸೃಷ್ಟಿಸುತ್ತಿರುವವರು, ಅದರಿಂದ ಲಾಭ ಪಡೆಯಲು ಯತ್ನಿಸುತ್ತಿರುವವರು ಮೊದಲು ಇದನ್ನು ತಿಳಿಯಬೇಕಿದೆ. ಅಂತರ್ಗತ ಸಮಾಜ ನಿರ್ಮಾಣಕ್ಕೆ ಬಿಜೆಪಿ ಬದ್ಧವಾಗಿದೆ. ಕಾಯ್ದೆಯಿಂದ ಮುಸ್ಲಿಮರಿಗೆ ಅಪಾಯವಿಲ್ಲ ಎಂದು ಹೇಳಿದ್ದಾರೆ.
ಕಾಯ್ದೆಯು ಪಾಕಿಸ್ತಾನ, ಬಾಂಗ್ಲಾದೇಶ, ಆಫ್ಘಾನಿಸ್ತಾನದಿಂದ ಬಂದ ಹಿಂದೂಗಳೂ, ಸಿಖ್ಕರು, ಜೈನರು, ಪಾರ್ಸಿಗಳು, ಬೌದ್ಧರು ಹಾಗೂ ಕ್ರಿಶ್ಚಿಯನ್ನರಿಗೆ ಪೌರತ್ವವನ್ನು ನೀಡಲಿದೆ . ಕಾಯ್ದೆ ಭಾರತೀಯ ಪೌರತ್ವದ ಮೇಲೆ ಪರಿಣಾಮ ಬೀರುವುದಿಲ್ರ. ಸಂಸತ್ತಿನಲ್ಲೂ ಇದನ್ನು ಸ್ಪಷ್ಟವಾಗಿ ಹೇಳಿದ್ದೇವೆ. ಪೌರತ್ವ ಕಾಯ್ದೆ 1955ರ ಪ್ರಕಾರ ಭಾರತದಲ್ಲಿ ಯಾರೂ ಬೇಕಾದರೂ ಪೌರತ್ವ ಪಡೆಯಬಹುದಿತ್ತು. ಆದರೆ, ಪ್ರಸ್ತುತ ತಿದ್ದುಪಡಿ ಕಾಯ್ದೆ ಭಿನ್ನವಾಗಿದೆ. ಕಳೆದ 5-6 ವರ್ಷಗಳಲ್ಲಿ 500ಕ್ಕೂ ಹೆಚ್ಚು ಮುಸ್ಲಿಮರು ಪೌರತ್ವವನ್ನು ಪಡೆದುಕೊಂಡಿದ್ದಾರೆ. ಮುಸ್ಲಿಮರು ಇಂದಿಗೂ ಪೌರತ್ವ ಪಡೆಯಲು ಬಯಸಿದ್ದೇ ಆದರೆ, ಈಗಲೂ ಸಿಗಲಿದೆ. ಆದರೆ, ಅದಕ್ಕೆ ಅದರದ್ದೇ ಆದ ಪ್ರಕ್ರಿಯೆಗಳಿರುತ್ತವೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ದೇಶದಾದ್ಯಂತ ಎನ್ ಆರ್ ಸಿ ಜಾರಿ ಕುರಿತ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಈ ಬಗ್ಗೆ ಈ ವರೆಗೂ ಯಾವುದೇ ರೀತಿಯ ನಿರ್ಧಾರಗಳನ್ನು ಕೈಗೊಳ್ಳಲಾಗಿಲ್ಲ ಎಂದಿದ್ದಾರೆ.