ಕುಂಬಳೆ: ಮಕ್ಕಳ ಚಟುವಟಿಕೆಗಳನ್ನು ಬೆಳೆಸುವಲ್ಲಿ ಶಲಾ ವರ್ಧಂತಿ ಉತ್ಸವಗಳು ಪೂರಕವಾಗಿದೆ. ತಮ್ಮ ತಮ್ಮ ಸಾಧನಾ ಚಟುವಟಿಕೆಗಳನ್ನು ವೇದಿಕೆಯಲ್ಲಿ ಪ್ರದರ್ಶಿಸಲು ವಿದ್ಯಾರ್ಥಿಗಳಿಗೆ ಉತ್ಸಾಹ ಸಹಜ. ಅವುಗಳನ್ನು ಗುರುತಿಸಿ, ಬೆಳೆಸುವ, ನೋಡಿ ಆನಂದಿಸುವ ಉತ್ಸಾಹವು ಅವರ ರಕ್ಷಕರಿಗೆ ಹಾಗೂ ಶಿಕ್ಷಕರಿಗೆ ಇರುತ್ತದೆ ಎಂದು ಮುಜುಂಗಾವು ಶ್ರೀಭಾರತಿ ವಿದ್ಯಾಪೀಠದ ಆಡಳಿತ ಸಮಿತಿ ಅಧ್ಯಕ್ಷ ಎಸ್.ಎನ್.ರಾವ್ ಮುನ್ನಿಪ್ಪಾಡಿ ಅವರು ತಿಳಿಸಿದರು.
ಮುಜುಂಗಾವು ಶ್ರೀಭಾರತೀ ವಿದ್ಯಾಪೀಠದಲ್ಲಿ ಶನಿವಾರ ಆಯೋಜಿಸಲಾಗಿದ್ದ ವರ್ಧಂತಿ ಉತ್ಸವದ ಅಧ್ಯಕ್ಷತೆ ವಹಿಸಿ, ದೀಪ ಬೆಳಗಿಸಿ ಅವರು ಮಾತನಾಡಿದರು.
ವೇದಿಕೆಯಲ್ಲಿ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಪುರುಷೋತ್ತ ಆಚಾರ್ಯ, ಕೋಶಾಧಿಕಾರಿ ಶ್ಯಾಮಾರಾಜ್ ದೊಡ್ಡಮಾಣಿ, ಎಮ್.ಕೆ.ಸುಬ್ರಹ್ಮಣ್ಯಭಟ್. ಆಡಳಿತಾಧಿಕಾರಿ ಶ್ಯಾಂಭಟ್ ದರ್ಭೆಮಾರ್ಗ, ಮುಖ್ಯೋಪಾಧ್ಯಾಯಿನಿ ಚಿತ್ರಾಸರಸ್ವತಿ, ಚಂದ್ರಶೇಖರ ಭಟ್ ಎಯ್ಯೂರು ಮೊದಲಾದವರು ಉಪಸ್ಥಿತರಿದ್ದು ಮಾತನಾಡಿದರು.
ವಿದ್ಯಾರ್ಥಿನಿ ಮಧುರಾ ಸಭಾಪೂಜನ ನಡೆಸಿದರು. ಸಂದೇಶ ವಂದಿಸಿದರು. ಶ್ರೀಲೇಖ ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಿದ್ಯಾರ್ಥಿ,ವಿದ್ಯಾರ್ಥಿನಿಯರಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಜರಗಿದುವು. ಅಪರಾಹ್ನ ನಡೆದ ಸಮಾರೋಪ ಸಭೆಯಲ್ಲಿ ಮುಖ್ಯೋಪಾಧ್ಯಾಯಿನಿ ಚಿತ್ರಾಸರಸ್ವತಿ ವರ್ಷದ ವರದಿವಾಚಿಸಿದರು. ಬ್ಲಾಕ್ ಪಂಚಾಯತಿ ಸದಸ್ಯ ಸತ್ಯಶಂಕರ ಭಟ್ ಹಿಳ್ಳೆಮನೆ ಅವರು ಮಕ್ಕಳ ಹಸ್ತಪ್ರತಿ ಪುಸ್ತಕ ಬೆಳಗು ಕೃತಿಯನ್ನು ಬಿಡುಗಡೆಗೊಳಿಸಿದರು. ದತ್ತಿನಿಧಿ ವಿತರಣೆ, ಬಹುಮಾನ ವಿತರಣೆ ನಡೆಯಿತು. ಬಳಿಕ ವಿದ್ಯಾರ್ಥಿಗಳ ನೃತ್ಯ, ನಾಟಕಗಳು ಪ್ರದರ್ಶನಗೊಂಡಿತು. ಆಡಳಿತಾಧಿಕಾರಿ ಶ್ಯಾಂಭಟ್ ದರ್ಭೆಮಾರ್ಗ ಅವರು ಕಾರ್ಯಕ್ರಮದ ಅವಲೋಕನ ನಡೆಸಿದರು. ಶಂಖನಾದ, ಧ್ವಜಾವರೋಹಣದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.