ಮಂಜೇಶ್ವರ: ಪ್ರತಿಭೆಗಳತ್ತ ವಿದ್ಯಾಲಯ ಎನ್ನುವ ಕೇರಳ ರಾಜ್ಯ ಶಿಕ್ಷಣ ಸಚಿವರ ನಿರ್ದೇಶನದನ್ವಯ ಕೊಡ್ಲಮೊಗರು ವಾಣೀವಿಜಯ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿಗಳು, ಅಧ್ಯಾಪಕರ ನೇತೃತ್ವದಲ್ಲಿ ಖ್ಯಾತ ಯಕ್ಷಗಾನ ಕಲಾವಿದ ಪೆರುವಾಯಿ ನಾರಾಯಣ ಶೆಟ್ಟಿ ಅವರ ಮನೆಗೆ ತೆರಳಿ ಅವರನ್ನು ಗೌರವಿಸಲಾಯಿತು.
ಪೆರುವಾಯಿ ನಾರಾಯಣ ಶೆಟ್ಟಿ ಅವರು ಕೂಡ್ಲು, ಧರ್ಮಸ್ಥಳ, ಕುಂಬಳೆ, ಪುತ್ತೂರು, ಅರುವ, ಕಟೀಲು ಹೀಗೆ ಅನೇಕ ಮೇಳಗಳಲ್ಲಿ ಸುಮಾರು 50 ವರ್ಷಗಳ ತಿರುಗಾಟವನ್ನು ನಡೆಸಿದವರು. ಜಾಬಾಲಿ, ಅರುಣಾಸುರ, ರಕ್ತಬೀಜ, ಇಂದ್ರಜಿತು ಮೊದಲಾದ ವೇಷಗಳು ಅವರಿಗೆ ಹೆಸರನ್ನು ತಂದುಕೊಟ್ಟಿವೆ. ಅದ್ಭುತವಾದ ಬಣ್ಣಗಾರಿಕೆ, ಮಾತುಗಾರಿಕೆ, ನಾಟ್ಯಕ್ಕೆ ಹೆಸರಾದ ಕಲಾವಿದರಿವರು. ನಾರಾಯಣ ಶೆಟ್ಟಿ ಅವರಿಂದ ವಿದ್ಯಾರ್ಥಿಗಳು ಅನೇಕ ಮಾಹಿತಿಗಳನ್ನು ಪಡೆದರು. ಬಳಿಕ ಹೂ, ಹಣ್ಣು ಇತ್ತು ಶಾಲು ಹೊದಿಸಿ ಅವರನ್ನು ಸಮ್ಮಾನಿಸಲಾಯಿತು. ಪ್ರಾಂಶುಪಾಲ ಚಂದ್ರ ಕುಮಾರ್, ಅಧ್ಯಾಪಕ ವಿಜಯ ಕುಮಾರ್, ಸ್ಮಿತಾ ನೇತೃತ್ವ ವಹಿಸಿದರು.