ಕಾಸರಗೋಡು: ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಶ್ರೀ ವರದರಾಜ ವೆಂಕಟರಮಣ ದೇವಸ್ಥಾನದಲ್ಲಿ 109 ನೆ ವರ್ಷದ ಸಂಕೀರ್ತನಾ ಸಪ್ತಾಹ ಡಿ.2 ರಂದು ಪ್ರಾರಂಭವಾಗಲಿದೆ.
ಬೆಳಗ್ಗೆ 7.25ಕ್ಕೆ ಪ್ರಾರ್ಥನೆ, ವರದರಾಜ ವೆಂಕಟರಮಣ ದೇವರಿಗೆ ಪೂಜೆ ನಡೆದು ಆ ಆರತಿಯಿಂದ ಸಪ್ತಾಹ ದೀಪದ ಪ್ರಜ್ವಲನೆ ಮಾಡಲಾಗುವುದು. ಕೀರ್ತನಗಾರರಿಂದ ಭಜನೆ ಪ್ರಾರಂಭಗೊಂಡು ವಿಠಲ ರಕುಮಾಯಿ ದೇವರ ಮೂರ್ತಿ ಹಾಗೂ ಪ್ರಜ್ವಲನೆ ಮಾಡಲಾದ ದೀಪದೊಂದಿಗೆ ಕ್ಷೇತ್ರಕ್ಕೆ ಪ್ರದಕ್ಷಿಣೆ ಬಂದು ದೇವರನ್ನು ಸಪ್ತಾಹ ಮಂಟಪದಲ್ಲಿ ಮತ್ತು ದೀಪವನ್ನು ರಂಗ ಶಿಲೆಯಲ್ಲಿ ಪ್ರತಿಷ್ಠೆ ಮಾಡಲಾಗುತ್ತದೆ. ನಿರಂತರ ಏಳು ದಿನಗಳ ಕಾಲ ರಂಗಶಿಲೆಯಲ್ಲಿ ಭಜನೆ ನಡೆಯಲಿದ್ದು ಊರ ಪರವೂರ ಅನೇಕ ಭಜನಾ ತಂಡಗಳು ಈ ವೇಳೆ ಭಾಗವಹಿಸಲಿವೆ.
ಡಿಸೆಂಬರ್ 9ರಂದು ಭಜನಾ ಮಂಗಲೋತ್ಸವ ನಡೆಯುವುದು. ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ದೇಗುಲಗಳಲ್ಲಿ ಕಾಸರಗೋಡು ವರದರಾಜ ವೆಂಕಟರಮಣ ದೇವಸ್ಥಾನದ ಸಂಕೀರ್ತನಾ ಸಪ್ತಾಹವು ಬಹಳ ಪ್ರಾಮುಖ್ಯತೆ ಪಡೆದಿದೆ. ಪಂಡರಪುರದ ವಿಠಲನ ಸಾನಿಧ್ಯವೇ ಇಲ್ಲಿ ಸಪ್ತಾಹ ವೇಳೆ ಇರುತ್ತದೆ ಎಂದು ನಂಬಿ ಬಂದಿದ್ದಾರೆ.