ಕುಂಬಳೆ: ನಾಯ್ಕಾಪು ಶ್ರೀ ಶಾಸ್ತಾ ಬನದ ಪರಿಸರದಲ್ಲಿ ನಾಯ್ಕಾಪಿನ ಸಾರ್ವಜನಿಕ ಏಕಾಹ ಭಜನಾ ಸಮಿತಿಯ ನೇತೃತ್ವದಲ್ಲಿ ನಡೆಯುತ್ತಿರುವ ಅಖಂಡ ಭಜನಾ ಸಪ್ತಾಹಕ್ಕೆ ಭಕ್ತಜನ ಪ್ರವಾಹವೇ ಹರಿದು ಬರುತಿದ್ದು ಐತಿಹಾಸಿಕ ಭಜನಾ ಕಾರ್ಯಕ್ರಮವಾಗಿ ಮುಂದುವರಿದಿದೆ. ಡಿ. 7 ರಂದು ಸಂಜೆ ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಅವರು ದೀಪ ಪ್ರಜ್ವಲನೆ ಮಾಡುವ ಮೂಲಕ ಚಾಲನೆ ನೀಡಿದ್ದ ಭಜನಾ ಸಪ್ತಾಹವು ನಿರಂತರವಾಗಿ ನಡೆಯುತ್ತಿದೆ. ಊರ - ಪರವೂರ ನೂರಾರು ಭಜನಾ ಸಂಘಗಳು, ಭಜನಾ ಸಂಕೀರ್ತನಕಾರರು ಭಜನಾರ್ಚನೆ ನಡೆಸುತ್ತಿದ್ದಾರೆ. ಪ್ರತಿದಿನ ಮಧ್ಯಾಹ್ನ ಹಾಗೂ ರಾತ್ರಿ ಎಲ್ಲ ಭಕ್ತಾದಿಗಳಿಗೆ ಅನ್ನದಾನ, ಬೆಳಿಗ್ಗೆ ಮತ್ತು ಸಾಯಂಕಾಲ ಉಪಹಾರದ ವ್ಯವಸ್ಥೆ ಏರ್ಪಡಿಸಲಾಗಿದ್ದು, ದಿನಂಪ್ರತಿ ಸಹಸ್ರ ಸಂಖ್ಯೆಯ ಭಕ್ತರು ಸೇರುತ್ತಾರೆ.ಡಿ. 14 ರ ವರೆಗೆ ಭಜನಾ ಸತ್ಸಂಗ ಮುಂದುವರಿಯಲಿದೆ.
ಹೊರೆಕಾಣಿಕೆ ಸಮರ್ಪಣೆ ಇಂದು(ಗುರುವಾರ)
ಅಖಂಡ ಭಜನ ಸಪ್ತಾಹಕ್ಕೆ ನಾರಾಯಣಮಂಗಲದ ಹತ್ತು ಸಮಸ್ತರು ಹಾಗೂ ಸ್ಥಳೀಯ ಶ್ರೀ ಮಹಾವಿಷ್ಣು ಭಜನಾ ಸಂಘದ ನೇತೃತ್ವದಲ್ಲಿ ಇಂದು (ಗುರುವಾರ) ಸಂಜೆ 5.30 ಕ್ಕೆ ನಾರಾಯಣಮಂಗಲ ಶ್ರೀ ಚೀರುಂಬಾ ಭಗವತೀ ಕ್ಷೇತ್ರ ಪರಿಸರದಿಂದ ವಿಶೇಷ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ಸಾಗಲಿದೆ. ವಿಶೇಷ ಶಿಂಗಾರಿ ಮೇಳದ ಸಾಥ್‍ನಲ್ಲಿ ಸಾಗಲಿರುವ ಮೆರವಣಿಗೆಯಲ್ಲಿ ಸರ್ವರೂ ಪಾಲ್ಗೊಳ್ಳಬೇಕಾಗಿ ಸಂಬಂಧಪಟ್ಟವರು ವಿನಂತಿಸಿದ್ದಾರೆ.