ಮುಳ್ಳೇರಿಯ: ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಮಂದಿರದ ಕೀರಿಕ್ಕಾಡು ಸ್ಮಾರಕ ಯಕ್ಷಗಾನ ಸಾಂಸ್ಕøತಿಕ ಅಧ್ಯಯನ ಕೇಂದ್ರದ ಸಭಾಭವನದಲ್ಲಿ ಪಾರ್ತಿಸುಬ್ಬ ವಿರಚಿತ `ಪಂಚವಟಿ' ಯಕ್ಷಗಾನ ತಾಳಮದ್ದಳೆ ಜರಗಿತು.
ಸಂಘದ ಹಿರಿಯ ಮದ್ದಳೆಗಾರರಾಗಿದ್ದ ದಿ.ಬಿ.ಎಚ್.ಅಣ್ಣಯ್ಯ ಗೌಡ ಅವರ ಸಂಸ್ಮರಣಾರ್ಥವಾಗಿ ಲಲಿತಾ ಅಣ್ಣಯ್ಯ ಗೌಡ ಹಾಗು ಮನೆಯವರು ಆಯೋಜಿಸಿದ ಈ ಕಲಾ ಸೇವಾ ಕಾರ್ಯಕ್ರಮದ ಮೊದಲಿಗೆ ಶ್ರೀ ಗೋಪಾಲಕೃಷ್ಣ ದೇವರಿಗೆ ವಿಶೇಷ ಪೂಜಾರ್ಚನೆ ಸಲ್ಲಿಸಲಾಯಿತು. ಬಳಿಕ ಸಂಘದ ಕಾರ್ಯದರ್ಶಿ ಹಿರಿಯ ಭಾಗವತ ವಿಶ್ವವಿನೋದ ಬನಾರಿಯವರ ನಿರ್ದೇಶನದೊಂದಿಗೆ ಮುನ್ನಡೆದ ತಾಳಮದ್ದಳೆಯ ಹಿಮ್ಮೇಳದಲ್ಲಿ ಭಾಗವತರಾಗಿ ಮೋಹನ ಮೆಣಸಿನಕಾನ, ಶಶಾಂಕ ಎಲಿಮಲೆ ಅವರು ಸಹಕರಿಸಿದರು. ವಿಷ್ಣು ಶರಣ ಬನಾರಿ, ಸದಾನಂದ ಪೂಜಾರಿ ಮಯ್ಯಾಳ, ಕೃಷ್ಣಪ್ರಸಾದ್ ಬೆಳ್ಳಿಪ್ಪಾಡಿ ಅವರು ಚೆಂಡೆಮದ್ದಳೆ ವಾದನದಲ್ಲಿ ಸಹಕರಿಸಿದರು. ಮುಮ್ಮೇಳದಲ್ಲಿ ಅರ್ಥಧಾರಿಗಳಾಗಿ ಕೆ.ಗಣೇಶ ಶರ್ಮ ಸಿದ್ಧಕಟ್ಟೆ(ಶ್ರೀರಾಮ), ಎಂ.ರಮಾನಂದ ರೈ ದೇಲಂಪಾಡಿ(ಲಕ್ಷ್ಮಣ), ಬಿ.ಎಚ್.ವೆಂಕಪ್ಪ ಗೌಡ(ಋಷಿಗಳು), ರಾಮ ನಾಯ್ಕ್ ದೇಲಂಪಾಡಿ(ಘೋರ ಶೂರ್ಪನಖಿ), ಎಂ.ಐತ್ತಪ್ಪ ಗೌಡ ಮುದಿಯಾರು(ಮಾಯಾ ಶೂರ್ಪನಖಿ) ಅವರು ತಮ್ಮ ಅರ್ಥಗಾರಿಕೆಯಿಂದ ಪ್ರೇಕ್ಷಕರ ಗಮನ ಸೆಳೆದರು. ಬಿ.ಎಚ್.ಮಮತಾ ಕೃಷ್ಣಪ್ರಸಾದ್ ಸ್ವಾಗತಿಸಿದರು. ದಿವ್ಯಾನಂದ ಪೆಂದರ್ಲಪದವು ವಂದಿಸಿದರು.