ನವದೆಹಲಿ: ಲೋಕಸಭಾ ಸದಸ್ಯರ ಸಂಖ್ಯೆಯನ್ನು ಈಗಿರುವ 543ರಿಂದ ಸಾವಿರಕ್ಕೇರಿಸಬೇಕು ಎಂದು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅನಿಸಿಕೆ ವ್ಯಕ್ತಪಡಿಸಿದ್ದಾರೆ. ರಾಜ್ಯಸಭಾ ಸದಸ್ಯರ ಸಂಖ್ಯೆಯನ್ನು ಕೂಡ ಅದಕ್ಕೆ ಅನುಗುಣವಾಗಿ ಹೆಚ್ಚಿಸಬೇಕು, ಇದರಿಂದ ಚುನಾಯಿತ ಪ್ರತಿನಿಧಿಗಳಿಗೆ ಮತದಾರರ ಮೇಲೆ ಪರಿಣಾಮಕಾರಿಯಾಗಿ ಗಮನಹರಿಸಲು ಸಾಧ್ಯವಾಗುತ್ತದೆ. ಭಾರತದಲ್ಲಿ ಲೋಕಸಭಾ ಸದಸ್ಯರಿಗೆ ಹೆಚ್ಚಿನ ಸಂಖ್ಯೆಯ ಮತದಾರರು ಹೊಂದಿದ್ದಾರೆ ಎಂದು ಅವರು ಹೇಳಿದ್ದಾರೆ.
ಅವರು ಸೋಮವಾರ ದೆಹಲಿಯಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸ್ಮರಣಾರ್ಥ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ ಅಧಿಕಾರದಲ್ಲಿರುವ ಪಕ್ಷಗಳಿಗೆ ಬಹುಸಂಖ್ಯೆ ಅಥವಾ ಬಹುಮತತ್ವದ ಬಗ್ಗೆ ಎಚ್ಚರಿಕೆ ನೀಡಿದರು. ದೇಶದ ಜನರು ಅವರಿಗೆ ಸಂಖ್ಯಾವಾರು ಬಹುಮತ ನೀಡಿರಬಹುದು ಆದರೆ ಬಹುಸಂಖ್ಯಾತ ಮತದಾರರು ಅದೇ ಪಕ್ಷವನ್ನೇ ಬೆಂಬಲಿಸಿದ್ದಾರೆ, ಅಥವಾ ಭವಿಷ್ಯದಲ್ಲಿ ಅದೇ ಪಕ್ಷದವರನ್ನು ಆರಿಸುತ್ತಾರೆ ಎಂದೇನಿಲ್ಲ ಎಂದು ಹೇಳಿದರು.
ಭಾರತೀಯ ಮತದಾರರನ್ನು ರಾಜಕೀಯ ನಾಯಕರು ಸರಿಯಾಗಿ ಅರ್ಥಮಾಡಿಕೊಂಡಿಲ್ಲ. ಹೀಗಾಗಿ ಅಧಿಕಾರ ಸಿಕ್ಕಿದಾಗ ನಾವು ಏನು ಬೇಕಾದರೂ ಮಾಡಬಹುದು ಎಂದು ಭಾವಿಸುತ್ತೇವೆ. ಆದರೆ ಅದು ಸಾಧ್ಯವಾಗುವುದಿಲ್ಲ. ತಮ್ಮ ಇಚ್ಛೆಯಂತೆ ನಡೆದುಕೊಂಡ ಪಕ್ಷಗಳಿಗೆ ಮತ್ತು ರಾಜಕೀಯ ನಾಯಕರಿಗೆ ಜನರು ಆಗಾಗ ಶಿಕ್ಷೆ ನೀಡುತ್ತಲೇ ಬಂದಿದ್ದಾರೆ ಎಂದರು.ಚುನಾವಣೆಯಲ್ಲಿ ಬಹುಮತ ಬಂದ ಪಕ್ಷ ಸ್ಥಿರ ಸರ್ಕಾರ ರಚಿಸುತ್ತದೆ. ಜನಪ್ರಿಯ ಬಹುಮತದ ಕೊರತೆಯಿಂದ ಮತ್ತೆ ಮತ್ತೆ ಅದೇ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯವಾಗುವುದಿಲ್ಲ.ಶೇಕಡಾವಾರು ಮತದಾನ ಇನ್ನೊಂದು ಪಕ್ಷಕ್ಕೆ ಹೋಗಿರುತ್ತದೆ. ಅದು ನಮ್ಮ ಸಂಸದೀಯ ಪ್ರಜಾಪ್ರಭುತ್ವದಲ್ಲಿ ಜನರು ನೀಡುವ ಸಂದೇಶವಾಗಿದೆ ಎಂದರು.ಏಕಕಾಲಕ್ಕೆ ಚುನಾವಣೆ ನಡೆಸುವ ಬಗ್ಗೆ ಮುಖರ್ಜಿ ಹೇಳಿದ್ದೇನು?: ಲೋಕಸಭೆ ಮತ್ತು ರಾಜ್ಯ ವಿಧಾನಸಭೆ ಚುನಾವಣೆಗಳನ್ನು ಏಕಕಾಲಕ್ಕೆ ನಡೆಸಬೇಕೆಂಬ ಪ್ರಧಾನಿ ನರೇಂದ್ರ ಮೋದಿಯವರ ಆಕಾಂಕ್ಷೆಗೆ ಸಹ ಉಪನ್ಯಾಸ ವೇಳೆ ಪ್ರತಿಕ್ರಿಯಿಸಿದ ಪ್ರಣಬ್ ಮುಖರ್ಜಿ, ಸಾಂವಿಧಾನಿಕ ತಿದ್ದುಪಡಿ ಮೂಲಕ ಅದನ್ನು ಒಂದು ಬಾರಿ ನಡೆಸಬಹುದು. ಆದರೆ ಚುನಾಯಿತ ಪ್ರತಿನಿಧಿಗಳು ಭವಿಷ್ಯದಲ್ಲಿ ಸರ್ಕಾರದ ಮೇಲೆ ವಿಶ್ವಾಸ ಕಳೆದುಕೊಳ್ಳುವುದಿಲ್ಲ ಎಂಬ ಬಗ್ಗೆ ಖಾತ್ರಿಯಿಲ್ಲವಲ್ಲ ಎಂದರು.
ತಮ್ಮ ಸುದೀರ್ಘ ಒಂದು ಗಂಟೆಯ ಭಾಷಣದಲ್ಲಿ ಲೋಕಸಭಾ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸಬೇಕೆಂಬುದೇ ಅವರ ವಾದವಾಗಿತ್ತು. ಲೋಕಸಭಾ ಸದಸ್ಯರ ಸಂಖ್ಯೆಯನ್ನು ಕಳೆದ ಬಾರಿ ಹೆಚ್ಚಿಸಿದ್ದು 1977ರಲ್ಲಿ. ಅದು 1971ರಲ್ಲಿ ನಡೆಸಲಾದ ದೇಶದ ಜನಗಣತಿಯಂತೆ 55 ಕೋಟಿಗಳಿಗೆ ಅನುಗುಣವಾಗಿ. ಆ ನಂತರ ಭಾರತ ದೇಶದ ಜನಸಂಖ್ಯೆ ದುಪ್ಪಟ್ಟಿಗಿಂತ ಹೆಚ್ಚಾಗಿದೆ. ಒಂದು ಲೋಕಸಭಾ ಕ್ಷೇತ್ರದಲ್ಲಿ ಸರಿಸುಮಾರು 16ರಿಂದ 18 ಲಕ್ಷ ಮತದಾರರು ಒಬ್ಬರನ್ನು ಆರಿಸುತ್ತಾರೆ. ಇಷ್ಟೊಂದು ಜನರಿಗೆ ಒಬ್ಬ ಲೋಕಸಭಾ ಸದಸ್ಯ ಅವರ ಬೇಕು-ಬೇಡಗಳನ್ನು ಈಡೇರಿಸಲು, ಅವರಿಗೆ ಸಹಾಯ ಮಾಡಲು ಹೇಗೆ ಸಾಧ್ಯ ಎಂಬುದು ಪ್ರಣಬ್ ಮುಖರ್ಜಿಯವರ ವಾದವಾಗಿದೆ.ಸಂಸತ್ತಿನಲ್ಲಿ ಸಾಕಷ್ಟು ಮಹಿಳಾ ಪ್ರತಿನಿಧಿಗಳ ಕೊರತೆ ಕೂಡ ಇದೆ ಎಂದರು.
ಬೇರೆ ದೇಶಗಳ ಉದಾಹರಣೆ ಕೊಟ್ಟ ಅವರು, ಬ್ರಿಟಿಷ್ ಸಂಸತ್ತಿನಲ್ಲಿ 650 ಸದಸ್ಯರಿದ್ದರೆ, ಕೆನಡಾದಲ್ಲಿ 443 ಸದಸ್ಯರಿದ್ದರೆ, ಯುಎಸ್ ಕಾಂಗ್ರೆಸ್ ನಲ್ಲಿ 535 ಸದಸ್ಯರಿದ್ದರೆ ಭಾರತ ಸಂಸತ್ತಿನ ಸದಸ್ಯರ ಸಂಖ್ಯೆಯನ್ನು ಏಕೆ ಹೆಚ್ಚಿಸಲು ಸಾಧ್ಯವಿಲ್ಲ ಎಂದು ಕೇಳಿದರು.ಲೋಕಸಭಾ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸಿದರೆ ಸಂಸತ್ತಿನ ಸೆಂಟ್ರಲ್ ಹಾಲ್ ನ್ನು ಲೋಕಸಭೆಯಾಗಿ ಮತ್ತು ಲೋಕಸಭೆಯನ್ನು ರಾಜ್ಯಸಭೆಗೆ ವರ್ಗಾಯಿಸಬಹುದು, ಪ್ರತ್ಯೇಕ ಸಂಸತ್ತು ಭವನ ನಿರ್ಮಿಸುವ ಅಗತ್ಯವಿಲ್ಲ ಎಂದು ಸಹ ಹೇಳಿದರು.