ಕೊಚ್ಚಿನ್: ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಖ್ಯಾತ ಗಾಯಕ ಕೆ.ಜೆ.ಯೇಸುದಾಸ್ ವಿರೋಧ ವ್ಯಕ್ತಪಡಿಸಿದ್ದು, 'ಅಯ್ಯಪ್ಪ ಭಕ್ತರ ಪ್ರಚೋದಿಸಬೇಡಿ' ಎಂದು ಎಚ್ಚರಿಕೆ ನೀಡಿದ್ದಾರೆ.
ಶಬರಿಮಲೆಗೆ ಮಹಿಳೆಯರ ಪ್ರವೇಶ ವಿಚಾರಕ್ಕೆ ಸಂಬಂಧಿಸಿದ ವಿಚಾರಣೆ ಸುಪ್ರೀಂ ಕೋರ್ಟ್ ನಲ್ಲಿ ಅಂತಿಮ ಹಂತ ತಲುಪಿರುವಂತೆಯೇ ಇತ್ತ ಇದೇ ವಿಚಾರವಾಗಿ ಮಾತನಾಡಿರುವ ಖ್ಯಾತ ಗಾಯಕ ಯೇಸುದಾಸ್ ಅವರು, ಮಹಿಳೆಯರ ಉಪಸ್ಥಿತಿಯಿಂದ ಪುರುಷ ಭಕ್ತರ ಮನಸ್ಸಿಗೆ ಭಂಗವಾಗಲಿದೆ ಎಂದಾದರೆ, ಮಹಿಳೆಯರು ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ ಭೇಟಿ ನೀಡದಿರುವುದೇ ಉತ್ತಮ ಎಂದು ಹೇಳಿದ್ದಾರೆ.
'ಸುಂದರವಾದ ಹುಡುಗಿಯೊಬ್ಬಳು, ಇಂದು ಆಕೆ ಧರಿಸುವ ಉಡುಪಿನಲ್ಲಿ ದೇಗುಲಕ್ಕೆ ತೆರಳಿದರೆ ಸ್ವಾಮಿ ಅಯ್ಯಪ್ಪನೇನೂ ಕಣ್ತೆರೆದು ನೋಡುವುದಿಲ್ಲ. ಆದರೆ, ಇತರೆ ಭಕ್ತರು ನೋಡುತ್ತಾರೆ, ಇದು ಸರಿಯಲ್ಲ. ಇದರಿಂದ ಭಕ್ತರ ಉದ್ದೇಶವೇ ಬದಲಾಗಲಿದೆ. ಇದೇ ಕಾರಣದಿಂದ ನೀವು ಬರಬೇಡಿ ಎಂದು ಅವರಿಗೆ (ಮಹಿಳೆಯರಿಗೆ) ನಾವು ಹೇಳುತ್ತಿದ್ದೇವೆ. ಇನ್ನೂ ಸಾಕಷ್ಟು ದೇವಸ್ಥಾನಗಳಿವೆ. ಮಹಿಳೆಯರು ಅಲ್ಲಿಗೆ ಹೋಗಲಿ. ಅಯ್ಯಪ್ಪ ಭಕ್ತರನ್ನು ಪ್ರಚೋದಿಸಬೇಡಿ ಎಂಬುದಷ್ಟೇ ಮಹಿಳೆಯರಿಗೆ ನನ್ನ ಮನವಿ ಎಂದು ಯೇಸುದಾಸ್ ಕಿಡಿಕಾರಿದ್ದಾರೆ.