ನವದೆಹಲಿ: ಆರು ದಿನಗಳ ಭಾರತ ಪ್ರವಾಸದಲ್ಲಿರುವ ಸ್ವೀಡನ್ ದೊರೆ ಕಾರ್ಲ್ ಗುಸ್ತಾಫ್ ಪತ್ನಿ ಸಿಲ್ವಿಯಾ ಅವರೊಡನೆ ಸೋಮವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದಾರೆ.
ಭವಿಷ್ಯದ ಸವಾಲುಗಳನ್ನು ಎದುರಿಸುವಲ್ಲಿ ಉಭಯ ದೇಶಗಳ ನಡುವೆ ಸಹಕಾರಿ ತಂತ್ರಜ್ಞಾನ-ನಾವೀನ್ಯತೆ ನಾಯಕತ್ವದ ಪಾತ್ರದ ಬಗ್ಗೆ ಚರ್ಚಿಸಲಾಗಿದ್ದು, ಉಗರ ನಿಗ್ರಹಕ್ಕಾಗಿ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಪರಸ್ಪರ ಸಹಕರಿಸಲು ಸಮ್ಮತಿಸಿವೆ.ನಿಯೋಗ ಮಟ್ಟದ ಮಾತುಕತೆಯಲ್ಲಿ ಪರಸ್ಪರ ಆಸಕ್ತಿಯ ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳಲ್ಲಿ ಹೆಚ್ಚಿನ ಒಮ್ಮುಖಗಳನ್ನು ನಿರ್ಮಿಸುವ ಬಯಕೆಯನ್ನು ನಾಯಕರು ದೃಢಪಡಿಸಿದರು.ಎಂದು ವಿದೇಶಾಂಗ ವ್ಯವಹಾರಗಳ ವಕ್ತಾರ ರವೀಶ್ ಕುಮಾರ್ ಟ್ವೀಟ್ ಮಾಡಿದ್ದಾರೆ.
ನವೀನ ನೀತಿ ಕುರಿತು ಭಾರತ-ಸ್ವೀಡನ್ ಉನ್ನತ ಮಟ್ಟದ ನೀತಿ ಸಂವಾದದ ಅಧ್ಯಕ್ಷತೆಯನ್ನು ಪ್ರಧಾನಿ ಮತ್ತು ಸ್ವೀಡನ್ ದೊರೆ ವಹಿಸಿದ್ದರು. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಆಹ್ವಾನದ ಮೇರೆಗೆ ಕಾರ್ಲ್ ಗುಸ್ತಾಫ್ ಮತ್ತು ರಾಣಿ ಸಿಲ್ವಿಯಾ ಸೋಮವಾರ ಬೆಳಿಗ್ಗೆ ಆರು ದಿನಗಳ ಭಾರತ ಪ್ರವಾಸಕ್ಕೆ ಆಗಮಿಸಿದ್ದಾರೆ. ಇದು ಭಾರತಕ್ಕೆ ಅವರ ಮೂರನೇ ಭೇಟಿಯಾಗಿದೆ.
ಪ್ರಧಾನಿ ಭೇಟಿಗೂ ಮೊದಲು ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಸ್ವೀಡನ್ ರಾಜದಂಪತಿಯನ್ನು ಭೇಟಿ ಮಾಡಿ, ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವ ಮಾರ್ಗಗಳ ಕುರಿತು ಚರ್ಚೆ ನಡೆಸಿದರು.