ಲಕ್ನೋ: ದೇಶಾದ್ಯಂತ ಈರುಳ್ಳಿ ಬೆಲೆ ಗಗನಕ್ಕೇರಿರುವುದು ಗ್ರಾಹಕರ ಕಣ್ಣಲ್ಲಿ ನೀರು ತರಿಸುತ್ತಿದೆ. ಈ ನಡುವೆ ಈರುಳ್ಳಿ ಖರೀದಿಸಲು ಪ್ರಧಾನಿ ಮೋದಿ ಕ್ಷೇತ್ರದಲ್ಲಿ ಲೋನ್ ಸಿಗುತ್ತಿದೆ!.
ಬಿಜೆಪಿ ಸರ್ಕಾರವನ್ನು ಟಾರ್ಗೆಟ್ ಮಾಡುವುದಕ್ಕೆ ಈರುಳ್ಳಿ ಬೆಲೆ ಏರಿಕೆ ಅಸ್ತ್ರ ಪ್ರತಿಪಕ್ಷಗಳಿಗೆ ದೊರೆತಿದ್ದು, ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದ ಯುವ ಘಟಕ ಪ್ರಧಾನಿ ನರೇಂದ್ರ ಮೋದಿ ಪ್ರತಿನಿಧಿಸುವ ಕ್ಷೇತ್ರದಲ್ಲಿ ವಿನೂತನ ರೀತಿಯಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದೆ. ಅದೇ ಈರುಳ್ಳಿ ಖರೀದಿಸಲು ಲೋನ್ ನೀಡುವ ವಿನೂತನ ಆಫರ್! ಇದಕ್ಕಾಗಿ ವಾರಾಣಸಿಯಲ್ಲಿ ಪ್ರತ್ಯೇಕ ಕೌಂಟರ್ ನ್ನು ತೆರೆಯಲಾಗಿದ್ದು, ಆಧಾರ್ ಕಾರ್ಡ್ ನ್ನು ಅಡ ಇಟ್ಟು ಈರುಳ್ಳಿ ಪಡೆಯಬಹುದಾಗಿದೆ.
ಈರುಳ್ಳಿ ಬೆಲೆ ಏರಿಕೆಯನ್ನು ಪ್ರತಿಭಟಿಸಲು ಈ ರೀತಿಯ ಕೌಂಟರ್ ತೆರೆಯಲಾಗಿದೆ, ಆಧಾರ್ ಕಾರ್ಡ್ ಅಥವಾ ಬೆಳ್ಳಿ ಆಭರಣಗಳನ್ನು ಅಡ ಇಟ್ಟುಕೊಂಡು ಈರುಳ್ಳಿ ನೀಡಲಾಗುತ್ತದೆ, ಕೆಲವು ಅಂಗಡಿಗಳಲ್ಲಿ ಈರುಳ್ಳಿಯನ್ನು ಲಾಕರ್ ಗಳಲ್ಲಿಯೂ ಇಡಲಾಗಿದೆ ಎಂದು ಸಮಾಜವಾದಿ ಪಕ್ಷದ ಕಾರ್ಯಕರ್ತರು ಹೇಳಿದ್ದಾರೆ.