ಮಂಜೇಶ್ವರ: ಪಾಟ್ನಾ ಜಿಲ್ಲೆಯ ನೆಹಾರ್ ಗ್ರಾಮದ ಮನೆಯೊಂದರಲ್ಲಿ ಕಾರೂ ಕುಮಾರನ ಪುತ್ರನ ಮೊದಲ ಹುಟ್ಟು ಹಬ್ಬದ ಸಂಭ್ರಮ. ಆದರೆ ಮನೆಯವರ ಮನದಾಳದಲ್ಲಿ ಮಡುಗಟ್ಟಿದ ನೋವು. ಕಳೆದ ಆರು ವರ್ಷಗಳಿಂದ ಮನೆಯ ಗೃಹ ಲಕ್ಷ್ಮಿ ಕಾರೂ ಕುಮಾರನ ತಾಯಿ ಧರ್ಮಶೀಲಾ(ಕಾಲೋ) ಕಾಣೆಯಾಗಿದ್ದರು. ಸ್ವಲ್ಪ ಮಾನಸಿಕ ವಿಕಲ್ಪತೆಗೊಳಗಾಗಿದ್ದ ಆಕೆ ಮನೆ ಬಿಟ್ಟು ತೆರಳಿದ್ದಳು. ಎಲ್ಲಿ ಹುಡುಕಾಡಿದರೂ ಸಿಕ್ಕಿರಲಿಲ್ಲ. ಆದರೆ ಮನೆಯವರ ಪ್ರಯತ್ನ, ಪ್ರಾರ್ಥನೆಗೆ ದೈವ ಸಹಾಯ, ಪೆÇೀಲೀಸರ ಮುಖಾಂತರ ಮನೆ ತಲುಪಿತು. ತಾಯಿ ಧರ್ಮಶೀಲಾ ಮರಳಿ ಮನೆಗೆ ಬರುವರೆಂಬ ಸಂತಸ ಮನೆಯ ಸಂಭ್ರಮಕ್ಕೆ ಕಳೆ ನೀಡಿತು.
ಕಳೆದ ಮೂರು ವರ್ಷಗಳಿಂದ ದೈಗೋಳಿಯ ಸಾಯಿನಿಕೇತನ ಸೇವಾಶ್ರಮದಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದರೂ ಭಾಷಾ ಸಮಸ್ಯೆಯಿಂದ ಮನೆಯವರನ್ನು ತಲುಪಲಾಗದ ಧರ್ಮಶೀಲಾ(ಕಾಲೋ) ಗೆ ಆಕಸ್ಮಿಕವಾಗಿ ಅರುಣಾಚಲ ಪ್ರದೇಶದ ಅಸಿಸ್ಟೆಂಟ್ ಕಮಿಷನರ್ ಕುಮಾರಿ ಅಂಜು ಉಪಾಧ್ಯಾಯ ಆಶ್ರಮಕ್ಕೆ ನೀಡಿದರು. ಈ ಭೇಟಿ ಮನೆ ತಲುಪಲು ಸಹಕರಿಸಿತು. ಆಶ್ರಮದ ವ್ಯವಸ್ಥಾಪಕರ ವಿನಂತಿಯ ಮೇರೆಗೆ ಕೆಲವಾರು ಉತ್ತರ ಭಾರತದ ನಿವಾಸಿಗಳನ್ನು ಅವರವರ ಗ್ರಾಮ್ಯ ಭಾಷೆಯಲ್ಲಿ ಮಾತನಾಡಿಸಿ, ಅವರು ಕೊಟ್ಟ ಮಾಹಿತಿಯನ್ನು ಆಧರಿಸಿ ವಿಳಾಸ ಪತ್ತೆ ಹಚ್ಚುವ ಕಾರ್ಯ ಮಾಡಲಾಯಿತು.
ಬಳಿಕ ಪಾಟ್ನಾದ ನೆಹಾರ್ ಹಳ್ಳಿಯಿಂದ ಬಂದ ಪುತ್ರ ಹಾಗೂ ಸೋದರಳಿಯ ಕಾಲೋರವರನ್ನು ಪ್ರೀತಿಯಿಂದ ಮನೆಗೆ ಕರದೊಯ್ದರು. ಬೀದಿಯಲ್ಲಿ ಅಲೆದಾಡುತ್ತಿದ್ದ ಅವರನ್ನು ಕರೆದುಕೊಂಡು ಬಂದು ಚಿಕಿತ್ಸೆ ನೀಡಿ, ಸಲಹಿ ಇದೀಗ ಮನೆಗೆ ಕಳಿಸುತ್ತಿರುವುದಕ್ಕೆ ಸಾಯಿ ನಿಕೇತನ ಮಾನಸಿಕ ಪುನಶ್ಚೇತನ ಕೆಂದ್ರಕ್ಕೆ ಧನ್ಯವಾದಗಳನ್ನು ಅರ್ಪಿಸಿದರೆ, ಕೇಂದ್ರದವರಿಗೆ ತಾಯಿ ಮಕ್ಕಳನ್ನು ಒಂದುಗೂಡಿಸಿದ ತೃಪ್ತಿ ಹಾಗೂ ಈ ಕಾರ್ಯಕ್ಕೆ ಸಂಪೂರ್ಣ ಸಹಕರಿಸಿದ ಅಸಿಸ್ಟೆಂಟ್ ಕಮಿಷನರ್ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.