ಕೋಲ್ಕತ್ತಾ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಸೋಮವಾರ ಬೃಹತ್ ಪ್ರತಿಭಟನೆ ನಡೆಸುತ್ತಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, "ನೀವು ಬೇಕಾದರೆ ನನ್ನ ಸರ್ಕಾರವನ್ನೇ ವಜಾಗೊಳಿಸಿ, ನಾನು ಮಾತ್ರ ಯಾವುದೇ ಕಾರಣಕ್ಕೂ ಪೌರತ್ವ ಕಾಯ್ದೆ ಜಾರಿಗೊಳಿಸುವುದಿಲ್ಲ" ಎಂದು ಕೇಂದ್ರ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.
ಪೌರತ್ವ ಕಾಯ್ದೆ ವಿರೋಧಿಸಿ ಸಹಸ್ರಾರು ಟಿಎಂಸಿ ಕಾರ್ಯಕರ್ತರೊಂದಿಗೆ ಇಂದು ಕೋಲ್ಕತ್ತಾದ ಬೀದಿಗಳಲ್ಲಿ ಮೆಗಾ ರ್ಯಾಲಿ ನಡೆಸಿದ ದೀದಿ, ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆಯುವವರೆಗೆ ಕೇಂದ್ರದ ವಿರುದ್ಧ ಬೃಹತ್ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.ಮೆಗಾ ರ್ಯಾಲಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಪಶ್ಚಿಮ ಬಂಗಾಳ ಸಿಎಂ, ನೀವು ಬೇಕಾದರೆ ನನ್ನ ಸರ್ಕಾವನು ವಜಾಗೊಳಿಸಿ. ಆದರೆ ನಾನು ಮಾತ್ರ ನಿಮಗೆ ಶರಣಾಗುವುದಿಲ್ಲ ಮತ್ತು ನಾನು ಬದುಕಿರುವವರೆಗೆ ಪೌರತ್ವ ಕಾಯ್ದೆಯನ್ನು ಜಾರಿಗೊಳಿಸಲು ಅವಕಾಶ ನೀಡುವುದಿಲ್ಲ ಎಂದು ಗುಡುಗಿದ್ದಾರೆ.ಇದೇ ವೇಳೆ ದಕ್ಷಿಣ ಬೆಂಗಾಳದಲ್ಲಿ ರೈಲ್ವೆ ನಿಲ್ದಾಣಕ್ಕೆ ಮತ್ತು ರೈಲುಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ಈ ಹಿಂಸಾಚಾರಕ್ಕೆ ಬಿಜೆಪಿಯೇ ಹೊಣೆ. ಕೆಲವು ದುಷ್ಕರ್ಮಿಗಳು ಕೇಸರಿ ಪಕ್ಷದಿಂದ ಹಣ ಪಡೆದು ಹಿಂಸಾಚಾರ ಕೃತ್ಯ ಎಸಗುತ್ತಿದ್ದಾರೆ. ಇದಕ್ಕಾಗಿ ಕೆಲವು ಶಕ್ತಿಗಳು ಹೊರಗಿನಿಂದ ಬಂದಿದ್ದು, ಅವರು ಹಿಂಸಾಚಾರದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದರು.ದೀದಿ ನೇತೃತ್ವದ ಮೆಗಾ ರ್ಯಾಲಿ ನಗರದ ಹೃದಯ ಭಾಗ ಕೆಂಪು ರಸ್ತೆಯಿಂದ ಆರಂಭವಾಗಿ ಸುಮಾರು 4 ಕಿಲೋ ಮೀಟರ್ ದೂರ ಸಾಗಿ ನೊಬೆಲ್ ಸಾಹಿತ್ಯ ಪ್ರಶಸ್ತಿ ಪುರಸ್ಕøತ ರವೀಂದ್ರನಾಥ್ ಠಾಗೂರ್ ಅವರ ನಿವಾಸ ಜೋರಸಖೋ ಠಾಕೂರ್ ಬ್ಯಾರಿ ಬಳಿ ಸಮಾವೇಶಗೊಂಡಿತು.ಪಶ್ಚಿಮ ಬಂಗಾಳದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಎನ್ ಆರ್ ಸಿ ಅನುಷ್ಠಾನಕ್ಕೆ ಅವಕಾಶ ನೀಡುವುದಿಲ್ಲ ಎಂದು ಪಕ್ಷದ ಕಾರ್ಯಕರ್ತರಿಗೆ ಅವರು ಮಮತಾ ಬ್ಯಾನರ್ಜಿ ಪ್ರತಿಜ್ಞಾ ವಿಧಿ ಬೋಧಿಸಿದರು.
ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಭಾರತದ ಈಶಾನ್ಯ ರಾಜ್ಯಗಳಲ್ಲಿ ಪ್ರತಿಭಟನೆ ಮುಂದುವರೆದಿದೆ. ಈ ಪ್ರತಿಭಟನೆ ಪಶ್ಚಿಮ ಬಂಗಾಳಕ್ಕೂ ವಿಸ್ತರಣೆಯಾಗಿದ್ದು, ತೀವ್ರ ಸ್ವರೂಪ ಪಡೆದುಕೊಂಡಿದೆ. ಈಗಾಗಲೇ ಪ್ರತಿಭಟನಾ ಸ್ವರೂಪ ಹಿಂಸಾಚರಕ್ಕೆ ತಿರುಗಿದೆ. ಹಾಗಾಗಿ ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರವೂ ಮುನ್ನೆಚ್ಚರಿಕಾ ಕ್ರಮವಾಗಿ ರಾಜ್ಯದ ಹಲವು ಜಿಲ್ಲೆಗಳಲ್ಲಿ 24 ಗಂಟೆಗಳ ಕಾಲ ಇಂಟರ್‍ನೆಟ್ ಸ್ಥಗಿತಗೊಳಿಸಿ ಆದೇಶಿಸಿದೆ.