ಕಾಸರಗೋಡು: ಜಿಲ್ಲೆಯ ಪೆರಿಯದಲ್ಲಿ ಕಿರು ವಿಮಾನ ನಿಲ್ದಾಣ(ಏರ್ ಸ್ಟ್ರಿಪ್) ನಿರ್ಮಾಣಕ್ಕೆ ಕೇಂದ್ರಸರ್ಕಾರ ಅನುಮತಿ ಮಂಜೂರುಗೊಳಿಸಿದೆ. ಈ ಮೂಲಕಿತಿಹಾಸಪ್ರಸಿದ್ಧ ಬೇಕಲ ಕೋಟೆಗೆ 'ಉಡಾನ್ ಫೋರ್' ಕಿರುವಿಮಾನ ಸೇವೆ ಶೀಘ್ರ ಆರಂಭಗೊಳ್ಳಲಿದೆ.
ರಾಷ್ಟ್ರೀಯ ಹೆದ್ದಾರಿಯಿಂದ ಸುಮಾರುಆರು ಕಿ.ಮೀ ದೂರದ ಕನಿಕುಂಡ್ ಪ್ರದೇಶದಲ್ಲಿ ಕಿರು ವಿಮಾನ ನಿಲ್ದಾಣ ನಿರ್ಮಾಣಗೊಳ್ಳಲಿದೆ. ಕಿರು ವಿಮಾನ ನಿಲ್ದಾಣ ನಿರ್ಮಾನಕ್ಕಿರುವ ಅಗತ್ಯ ಭೂಮಿ ಹಾಗೂ ಮೂಲಸೌಕರ್ಯ ಕೇರಳ ಸರ್ಕಾರ ಒದಗಿಸಿಕೊಡಬೇಕಾಗಿದೆ. ವಿಮಾನ ನಿಲ್ದಾಣ ನಿರ್ಮಾಣಕ್ಕೆ ಪ್ರಥಮ ಹಂತದಲ್ಲಿ 80ಎಕರೆ ಭೂಮಿ ಗುರುತಿಸಲಾಗಿದೆ. ಯೋಜನೆಗೆ ಸುಮಾರು 60ಕೋಟಿ ರೂ. ಖರ್ಚು ಅಂದಾಜಿಸಲಾಗಿದೆ. ಇದರಲ್ಲಿ ಶೇ. 51ರಷ್ಟು ಪಾಲು ಕೇರಳ ಸರ್ಕಾರ ಹಾಗೂ ಉಳಿದ 49ಶೇ. ಮೊತ್ತವನ್ನು ಖಾಸಗಿ ವಲಯದಿಂದ ಸಂಗ್ರಹಿಸುವ ಗುರಿಯಿರಿಸಲಾಗಿದೆ.
2006ರಲ್ಲಿ ಅಂದಿನ ಮುಖ್ಯಮಂತ್ರಿ ವಿ.ಎಸ್ ಅಚ್ಯುತಾನಂದನ್ ಕಾಲಾವಧಿಯಲ್ಲಿ ಯೋಜನೆಗೆ ರೂಪುರೇಷೆ ನೀಡಲಾಗಿದ್ದು, ಪ್ರಸಕ್ತ ಕಾಸರಗೋಡು ಜಿಲ್ಲಾ ಪಂಚಾಯಿತಿ ಹೆಚ್ಚಿನ ಆಸಕ್ತಿ ವಹಿಸಿದ ಹಿನ್ನೆಲೆಯಲ್ಲಿ ಆರ್‍ಸ್ಟ್ರಿಪ್ ನಿರ್ಮಾಣಕಾರ್ಯಕ್ಕೆ ವೇಗ ಲಭಿಸಿದೆ.
ಪ್ರವಾಸೋದ್ಯಮಕ್ಕೆ ವೇಗ:
ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಬೇಕಲ ಕೋಟೆ, ಕೇಂದ್ರೀಯ ವಿಶ್ವ ವಿದ್ಯಾಲಯ, ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಕೇಂದ್ರ(ಸಿಪಿಸಿಆರ್‍ಐ), ಪೆರಿಯ ಸನಿಹ ಶ್ರೀಸಾಯಿ ಟ್ರಸ್ಟ್‍ನ ಅಧೀನದಲ್ಲಿ ಕಾರ್ಯಾಚರಿಸಲಿರುವ ಕ್ಯಾಶ್‍ಲೆಸ್ ಕೌಂಟರ್ ಮಲ್ಟಿ ಸ್ಪೆಶ್ಯಾಲಿಟಿ ಆಸ್ಪತ್ರೆ ಕಿರು ವಿಮಾನ ನಿಲ್ದಾಣ ನಿರ್ಮಾಣಗೊಳ್ಳುವ ಪ್ರದೇಶದ ಆಸುಪಾಸಿನಲ್ಲಿದೆ. ಅಲ್ಲದೆ ಪ್ರಕೃತಿ ರಮಣೀಯ ಪ್ರದೇಶಗಳಾದ ರಾಣಿಪುರ, ಪೊಸಡಿಗುಂಪೆ, ಕಣ್ವತೀರ್ಥ, ಮಧೂರು ಕ್ಷೇತ್ರ, ಸರೋವರ ಕ್ಷೇತ್ರ ಅನಂತಪುರ, ಮಾಲಿಕ್‍ದೀನಾರ್ ಮಸೀದಿ, ಬೇಳ ಶೋಕಮಾತಾ ಇಗರ್ಜಿ, ಚಂದ್ರಗಿರಿ, ಪೊವ್ವಲ್, ಆರಿಕ್ಕಾಡಿ ಕೋಟೆಗಳಿಗೆ ಆಗಮಿಸುವ ಪ್ರವಾಸಿಗಳಿಗೂ ಕಿರು ವಿಮಾನ ನಿಲ್ದಾಣ ಸಹಕಾರಿಯಾಗಲಿದೆ.
ಕಣ್ಣೂರು ಹಾಗೂ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪೆರಿಯಕ್ಕೆ ಸನಿಹವಿರುವುದರಿಂದ ಅಲ್ಲಿಂದ ಪೆರಿಯದ ಕಿರು ವಿಮಾನ ನಿಲ್ದಾಣಕ್ಕೆ ಪ್ರವಾಸಿಗರನ್ನು ಕರೆತರುವ ಯೋಜನೆಗೆ ಹೆಚ್ಚಿನ ಪ್ರಾಧಾನ್ಯತೆ ಲಭಿಸಲಿದೆ. ಇದರಿಂದ ವಿದೇಶಿ ಹಾಗೂ ಆಂತರಿಕ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆಯಿದೆ.
ಅಭಿಮತ: ಪೆರಿಯದಲ್ಲಿ ಕಿರುವಿಮಾನ ನಿಲ್ದಾಣ ನಿರ್ಮಾಣ ಯೋಜನೆ ಜಿಲ್ಲಾ ಪಂಚಾಯಿತಿಯ ಕನಸಾಗಿದ್ದು, ಜಿಲ್ಲಾಡಳಿತ, ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ಸಹಕಾರದೊಂದಿಗೆ ಕಿರು ವಿಮಾನ ನಿಲ್ದಾಣ ತಲೆಯೆತ್ತಲಿದ್ದು, ಜಿಲ್ಲೆಯ ಅಭಿವೃದ್ಧಿಗೆ ಕಿರುವಿಮಾನ ನಿಲ್ದಾಣ ಮಹತ್ವದ ಕೊಡುಗೆ ನೀಡಲಿದೆ.
ಎ.ಜಿ.ಸಿ ಬಶೀರ್, ಅಧ್ಯಕ್ಷ
ಕಾಸರಗೋಡು ಜಿಲ್ಲಾ ಪಂಚಾಯಿತಿ