ಬದಿಯಡ್ಕ: ಬೇಳ ಕಡಂಬಳ ಸರ್ಕಾರಿ ಎಲ್.ಪಿ. ಶಾಲಾ ಪರಿಸರವನ್ನು ಡಿವೈಎಫ್‍ಐ ಸಂಘಟನೆಯ ನೇತೃತ್ವದಲ್ಲಿ ಶುಚೀಕರಿಸಲಾಯಿತು. ರಾಜ್ಯಾದ್ಯಂತ ಸಂಘಟನೆಯು ನಡೆಸಿಕೊಂಡು ಬರುತ್ತಿರುವ ಶಾಲೆ, ಅಂಗನವಾಡಿಗಳ ಶುಚೀಕರಣದ ಭಾಗವಾಗಿ ನೀರ್ಚಾಲು ವಲಯವೂ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಶಾಲಾ ಮುಖ್ಯೋಪಾಧ್ಯಾಯ ಕೆ. ಸುಬ್ರಹ್ಮಣ್ಯ ಭಟ್ ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳ ಸುರಕ್ಷತೆ ಆದ್ಯತೆಯನ್ನು ನೀಡಿ ಹಮ್ಮಿಕೊಂಡ ಇಂತಹ ಕಾರ್ಯಕ್ರಮಗಳು ಎಲ್ಲೆಡೆ ನಡೆಯಬೇಕು. ಶುಚಿತ್ವದಿಂದ ಆರೋಗ್ಯದಾಯಕ ಜೀವನ ಸಾಧ್ಯ ಎಂದರು.
ಡಿವೈಎಫ್‍ಐ ಕುಂಬಳೆ ಬ್ಲಾಕ್ ಉಪಾಧ್ಯಕ್ಷ ಬಿ.ಎನ್ ಸುಬೈರ್ ಅಧ್ಯಕ್ಷತೆ ವಹಿಸಿದ್ದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಹಮೀದ್ ನೀರ್ಚಾಲು, ಅಧ್ಯಾಪಕರಾದ ಅನಿಲ್ ಕುಮಾರ್, ಜೆ. ಸತೀಶ, ಬಿಂದು, ಸ್ಟಾನಿ ಡಿಸೋಜಾ ಮಾತನಾಡಿದರು. ವಲಯ ಹಾಗೂ ಯೂನಿಟ್ ಸದಸ್ಯರುಗಳಾದ ಹಮೀದ್ ಕಡಂಬಳ, ಲಮಿತಾ ಮಾನ್ಯ, ಹಾರೀಸ್ ಕಡಂಬಳ, ಸಿರಾಜ್, ಶರೀಫ್, ಶಾಫಿ, ಯಾಸೀನ್ ನೇತೃತ್ವವನ್ನು ವಹಿಸಿದರು. ವಲಯ ಕಾರ್ಯದರ್ಶಿ ಉದಯನ್ ಪಣಿಕ್ಕರ್ ಸ್ವಾಗತಿಸಿದರು. ಶಾಲಾ ಪರಿಸರದಲ್ಲಿರುವ ಪೊದೆಗಳನ್ನು ತೆರವುಗೊಳಿಸಿ, ಬಾವಿಯನ್ನು ಶುಚಿಗೊಳಿಸಲಾಯಿತು.