ಬದಿಯಡ್ಕ: ಬಹುಭಾಷಾ ಸಂಗಮ ಭೂಮಿಯಾದ ಗಡಿನಾಡು ಕಾಸರಗೋಡಿನ ಮೂಲ ಪರಂಪರೆಯಾದ ಕನ್ನಡ-ತುಳು ಭಾಷೆಗಳ ಸಮೃದ್ದತೆ ನಾಡು ನುಡಿಯ ಸೇವೆಗಳಿಂದ ಶ್ರೀಮಂತಗೊಂಡಿದೆ. ಆದರೆ ವರ್ತಮಾನದ ಹಲವು ತಲ್ಲಣಗಳಂತೆ ಪರಂಪರೆಯ ನಾಶಕ್ಕೆ ವ್ಯವಸ್ಥಿತ ಷಡ್ಯಂತ್ರಗಳು ಕಾರ್ಯವೆಸಗುತ್ತಿರುವುದರಿಂದ ಗಡಿನಾಡಿನ ಕನ್ನಡ-ತುಳು ಭಾಷೆಗಳ ಬೆಳವಣಿಗೆಗೆ ಧಕ್ಕೆಗಳು ಉಂಟಾಗುತ್ತಿದೆ ಎಂದು ಹಿರಿಯ ಸಾಹಿತಿ, ಪತ್ರಕರ್ತ, ಸವಿ ಹೃದಯದ ಕವಿಮಿತ್ರರು ವೇದಿಕೆಯ ನಿರ್ದೇಶಕ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಕರ್ನಾಟಕ ಮಕ್ಕಳ ಸಾಹಿತ್ಯ ಪರಿಷತ್ತು ಆದಿ ಚುಂಚನಗಿರಿ ಮಹಾಸಂಸ್ಥಾನ ಹಾಸನದ ನೇತೃತ್ವದಲ್ಲಿ ಶುಕ್ರವಾರ ಹಾಗೂ ಶನಿವಾರ ಹಾಸನದಲ್ಲಿ ಎರಡು ದಿನಗಳ ಅಖಿಲ ಭಾರತ ಕನ್ನಡ ಮಕ್ಕಳ ಪ್ರಥಮ ಸಾಹಿತ್ಯ ಸಮ್ಮೇಳನದ ಅಂಗವಾಗಿ ಶುಕ್ರವಾರ ಅಪರಾಹ್ನ ನಡೆದ ಪ್ರಸಕ್ತ ಕನ್ನಡ ನಾಡಿನ ಸ್ಥಿತಿಗತಿ ವಿಷಯದ ವಿಚಾರ ಸಂಕಿರಣದಲ್ಲಿ ಪ್ರಧಾನ ಭಾಷಣಗೈದು ಅವರು ಮಾತನಾಡಿದರು.
ಸಾವಿರಾರು ವರ್ಷಗಳ ಬೃಹತ್ ಇತಿಹಾಸವಿರುವ, ಕನ್ನಡ ಸಾಹಿತ್ಯ, ಕಲೆ, ಆಡಳಿತ,ವ್ಯಾಪಾರ, ಸಾಂಸ್ಕøತಿಕ ಚರಿತ್ರೆಗಳಲ್ಲಿ ಗಮನಾರ್ಹ ಕೊಡುಗೆಗಳ ಮೂಲಕ ಶ್ರೀಮಂತ ಪರಂಪರೆಯ ಕಾಸರಗೋಡಿನ ಕನ್ನಡಿಗರು ಇಂದು ಭಾಷಾ ಅಲ್ಪಸಂಖ್ಯಾತತೆಯ ಬೇಗುದಿಗೆ ಒಳಗಾಗಿದ್ದಾರೆ. ತಮ್ಮ ಸಾಂವಿಧಾನಿಕ ಹಕ್ಕು ಸಹಿತ ದೈನಂದಿನ ಚಟುವಟಿಕೆಗಳಲ್ಲಿ ಸರ್ಕಾರದ ಮಲತಾಯಿ ಧೋರಣೆಗಳಿಂದ ಕಷ್ಟದಲ್ಲಿದ್ದಾರೆ. ಆದರೂ ಹಲವಾರು ಸಂಘಟನೆಗಳ ಸತತ ಪರಿಶ್ರಮದ ಫಲವಾಗಿ ತಮ್ಮತನವನ್ನು ಉಳಿಸುವಲ್ಲಿ ಕಟಿಬದ್ದರಾಗಿ ಕನ್ನಡ ನಾಡು-ನುಡಿಯ ಸೇವೆಯನ್ನು ಮುನ್ನಡೆಸುತ್ತಿದ್ದಾರೆ. ಸವಿ ಹೃದಯದ ಕವಿಮಿತ್ರರಂತಹ ಬಳಗಗಳು ನಿರಂತರ ಚಟುವಟಿಕೆಯ ಮೂಲಕ ಕನ್ನಡ ಸಾಹಿತ್ಯ-ಸಾಂಸ್ಕøತಿಕ ಪರಿಸರ ನಿರ್ಮಾಣದಲ್ಲಿ ಸಕ್ರಿಯರಾಗಿದ್ದಾರೆ ಎಂದು ಅವರು ತಿಳಿಸಿದರು.
ಬಾಲಕ ಅನೀಶ್ ಬಿ.ಕೊಪ್ಪ ಅಧ್ಯಕ್ಷತೆ ವಹಿಸಿದ್ದ ವಿಚಾರ ಸಂಕಿರಣದಲ್ಲಿ ಕು.ರುಚಿತ ಎಸ್.ಚಾಮರಾಜನಗರ ಹಾಗೂ ಯಶ್ವಂತ್ ಗುಲಸಿಂದ ವಿಷಯಮಂಡನೆಗೈದರು. ಹಿರಿಯ ಸಾಹಿತಿ ಬೇಂದ್ರೆ ಕೃಷ್ಣಪ್ಪ ಸಮನ್ವಯಕಾರರಾಗಿದ್ದರು. ಕಾವ್ಯಾ ಸಿ.ಎಚ್., ಬಲರಾಮು, ಶಿವನಂಜೇಗೌಡ, ತಿಮ್ಮೇಶ್ ಪ್ರಭು, ಮಲ್ಲಿಕಾರ್ಜುನ್, ಸುಬ್ಬುಸ್ವಾಮಿ, ಶಿವಕುಮಾರ್ ಕಣಸೋಗಿ, ಡಾ.ಮಹೇಶ್, ಡಾ.ವಿಜಯಕುಮಾರ್, ಎಸ್.ಎ.ಸಚಿನ್, ಸಿ.ಎಸ್.ಮನೋಹರ್, ಕೃಷ್ಣಪ್ಪ, ಚೆನ್ನೇನಹಳ್ಳಿಸ್ವಾಮಿ, ಶೀತಲ್ ಕುಮಾರ್, ನಾರಾಯಣ್ ನಾಯಕ್, ಸಂಜೀವ್ ದುಮಕನಾಳ, ಜಿ.ಹಂಪೇಶ್, ಮಂಜುನಾಥ್, ರವೀಶ್,ಎಚ್.ಎಂ.ಗೌಡಯ್ಯ, ರಾಮು ಮೊದಲಾದವರು ಉಪಸ್ಥಿತರಿದ್ದು ಮಾತನಾಡಿದರು. ಮಕ್ಕಳ ಸಾಹಿತ್ಯ ಪರಿಷತ್ತು ರಾಜ್ಯಾಧ್ಯಕ್ಷ ಸಿ.ಎನ್.ಅಶೋಕ್, ಆದಿಚುಂಚನಗಿರಿ ಮಠದ ಶಾಖಾಧಿಕಾರಿ ಎಚ್.ಕೆ.ಚಂದ್ರಶೇಖರ್, ಕೇಂದ್ರ ಮಕ್ಕಳ ಸಾಹಿತ್ಯ ಪರಿಷತ್ತಿನ ಸಂಚಾಲಕ ಎ.ಎಂ.ಜಯರಾಮ್, ಹಾಸನ ತಾಲೂಕು ಅಧ್ಯಕ್ಷ ಚಂದ್ರಶೇಖರ್, ಅರಸೀಕೆರೆ ತಾಲೂಕು ಅಧ್ಯಕ್ಷ ಅನಂತಕುಮಾರ್ ಮೊದಲಾದವರು ಉಪಸ್ಥಿತರಿದ್ದರು. ಜಾಹ್ನವಿ ಕೆ.ಪಿ.ಕುಂದೂರ್ ಸ್ವಾಗತಿಸಿ, ಆದಿತ್ಯ ಬ್ಯಾಡರಹಳ್ಳಿ ವಂದಿಸಿದರು.ರೇಖಾಶ್ರೀ ಚಾಮರಾಜನಗರ ಕಾರ್ಯಕ್ರಮ ನಿರೂಪಿಸಿದರು. ಯಶೋಧ ಜೈನ್ ಸಹಕರಿಸಿದರು.