ಉಪ್ಪಳ: ರಾಜ್ಯ ಪ್ರಶಸ್ತಿ ಪುರಸ್ಕøತ ಸಿ.ರಾಘವ ಬಲ್ಲಾಳ್ ಅವರು ಆದರ್ಶ ನಿವೃತ್ತ ಮುಖ್ಯೋಪಾಧ್ಯಾಯರು. ಸರಳ ಸೌಜನ್ಯಮೂರ್ತಿಯಾದ ಅವರು ಸಮಾಜದ ಅಭಿವೃದ್ಧಿಗೆ ಹಲವು ಕೊಡುಗೆಗಳನ್ನು ನೀಡಿದ್ದಾರೆ. ತಮ್ಮ ಸುದೀರ್ಘ ಅಪೂರ್ವ ಸೇವೆಯಿಂದ ಗುರುತಿಸಲ್ಪಟ್ಟ ಅವರನ್ನು ನಾಡಿನ ಸರ್ವರೂ ಸೇರಿ ಪೌರ ಸಮ್ಮಾನದ ಮೂಲಕ ಗೌರವಿಸಿ ಅಭಿನಂದಿಸುವುದು ಅತ್ಯಂತ ಅರ್ಥಪೂರ್ಣವೆಂದು ಕುರುಡಪದವು ಕುರಿಯ ವಿಠಲ ಶಾಸ್ತ್ರಿ ಸ್ಮಾರಕ ಹೈಸ್ಕೂಲಿನ ಪ್ರಬಂಧಕ ಕೆ.ಗೋಪಾಲಕೃಷ್ಣ ಭಟ್ ಅಭಿಪ್ರಾಯಪಟ್ಟರು.
ಅವರು ಪೈವಳಿಕೆ ನಗರದ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಸಿ.ರಾಘವ ಬಲ್ಲಾಳ್ ಅಭಿನಂದನ ಸಮಿತಿಯ ಆಶ್ರಯದಲ್ಲಿ ಜರಗಿದ ಸಭೆಯಲ್ಲಿ ಪೌರ ಸಮ್ಮಾನ ಸಮಾರಂಭದ ಆಮಂತ್ರಣ ಪತ್ರವನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ನ್ಯಾಯವಾದಿ ಎನ್.ಕೆ.ಮೋಹನದಾಸ್, ಟಿ.ಡಿ.ಸದಾಶಿವ ರಾವ್, ವಿಶ್ವನಾಥ ಕೆ, ಬಾಬು ರೈ ಕೆ, ಅಬ್ದುಲ್ ರೆಹಮಾನ್, ಅಜೀಜ್ ಪೈವಳಿಕೆ ಮೊದಲಾದವರು ಸಲಹೆ ಸೂಚನೆಗಳನ್ನು ನೀಡಿದರು. ವಿವಿಧ ಸಮಿತಿಯ ಪದಾಧಿಕಾರಿಗಳಾದ ಕೆ.ಸತ್ಯನಾರಾಯಣ ಭಟ್, ಶೇಖರ ಶೆಟ್ಟಿ ಕೆ, ರಮೇಶ್ ಪಿ, ಪಿ.ರಾಮಚಂದ್ರ ಭಟ್ ಧರ್ಮತ್ತಡ್ಕ, ಎ.ಬಿ.ರಾಧಾಕೃಷ್ಣ ಬಲ್ಲಾಳ್, ಕೆ.ಎಂ.ಬಲ್ಲಾಳ, ನಯನ ಪ್ರಸಾದ್ ಎಚ್.ಟಿ. ಮೊದಲಾದವರು ಈ ತನಕ ನಡೆದ ಸಿದ್ಧತೆಯ ಕುರಿತು ವರದಿ ನೀಡಿದರು.
ಸಭಾಧ್ಯಕ್ಷೆ ವಹಿಸಿದ್ದ ಸಿ.ರಾಘವ ಬಲ್ಲಾಳ್ ಅಭಿನಂದನ ಸಮಿತಿಯ ಅಧ್ಯಕ್ಷ, ಕಸಾಪ ಗಡಿನಾಡ ಘಟಕಾಧ್ಯಕ್ಷ ಎಸ್.ವಿ.ಭಟ್ ಪೌರ ಸಮ್ಮಾನ ಸಮಾರಂಭ ಸಂಪೂರ್ಣ ಯಶಸ್ವಿಗೊಳ್ಳಲು ಸರ್ವರೂ ಸಹಕರಿಸಬೇಕೆಂದು ವಿನಂತಿಸಿದರು. ಶೇಖರ ಶೆಟ್ಟಿ ಕೆ. ಪ್ರಾರ್ಥನೆ ಹಾಡಿದರು. ಅಭಿನಂದನ ಗ್ರಂಥ ಸಂಪಾದಕ ಮಂಡಳಿ ಸದಸ್ಯೆ ಕೆ.ಶ್ರೀಕುಮಾರಿ ಕಾರ್ಯಕ್ರಮ ನಿರ್ವಹಿಸಿದರು.