ಪೆರ್ಲ:ಕೇರಳ ಕರ್ನಾಟಕ ಗಡಿ, ಎಣ್ಮಕಜೆ ಗ್ರಾ.ಪಂ. ಒಂದನೇ ವಾರ್ಡ್ ಸಾಯ ವ್ಯಾಪ್ತಿಯ ಬಾಕಿಲಪದವು ಎಲ್ಲಾ ರೀತಿಯಲ್ಲೂ ಮೂಲ ಸೌಕರ್ಯ ವಂಚಿತ ಪ್ರದೇಶವಾಗಿದ್ದು ಇಲ್ಲಿನ ಅಭಿವೃದ್ಧಿಗೆ ಶ್ರಮಿಸದ ಜನಪ್ರತಿನಿಧಿಗಳು, ಅಧಿಕಾರಿ ವರ್ಗದ ನಿರ್ಲಕ್ಷ್ಯ ಧೋರಣೆಗೆ ಎದುರಾಗಿ ಬಾಕಿಲಪದವು ನಾಗರಿಕ ಕ್ರೀಯಾ ಸಮಿತಿ ನೇತೃತ್ವದಲ್ಲಿ ಸೋಮವಾರ ಎಣ್ಮಕಜೆ ಗ್ರಾಮ ಪಂಚಾಯಿತಿ ಕಾರ್ಯಾಲಯಕ್ಕೆ ಪಿಕೆಟಿಂಗ್ ನಡೆಸಲಾಯಿತು.
ಸಿ.ಎ ಸುಬೈರ್ ಪ್ರತಿಭಟನಾ ಸಭೆ ಉದ್ಘಾಟಿಸಿದರು. ಸದಾನಂದ ವರ್ಮುಡಿ ಅಧ್ಯಕ್ಷತೆ ವಹಿಸಿದರು.ನರಸಿಂಹ ಪೂಜಾರಿ, ರಾಮಕೃಷ್ಣ ರೈ ಮತ್ತಿತರರು ಮಾತಾನಾಡಿದರು.
ಅಡ್ಯನಡ್ಕ-ಬಾಕಿಲಪದವು ರಸ್ತೆ, ಎರುಗಲ್ಲು ರಸ್ತೆ, ಕಲ್ಯಾಟೆ ರಸ್ತೆ, ಪಿಲಿಗುಡ್ಡೆ ರಸ್ತೆಗಳ ಡಾಮರೀಕರಣ ನಡೆಸುವಂತೆ, ಜನರು 5 ಕಿ.ಮೀ.ದೂರದ ಪೆರ್ಲಕ್ಕೆ ತುರ್ತು ಚಿಕಿತ್ಸೆ, ಪ್ರಾಥಮಿಕ ಅರೋಗ್ಯ ಕೇಂದ್ರ, ಪಂಚಾಯಿತಿ, ಸರ್ಕಾರಿ ಕಚೇರಿಗಳಿಗೆ ಬರಲು ನಲ್ಕ ದಾರಿಯಾಗಿ 15 ಕಿ.ಮೀ.ಸುತ್ತು ಬಳಸಬೇಕಾಗಿದ್ದು ಬಾಕಿಲಪದವು-ಬಿರ್ಮೂಲೆ ನಡುವೆ ಶಿರಿಯ ಹೊಳೆಗೆ ಸೇತುವೆ ನಿರ್ಮಿಸುವಂತೆ ಹಾಗೂ ಕುಡಿನೀರು ಸಮಸ್ಯೆಗೆ ಶಾಶ್ವತ ಪರಿಹಾರ ಮತ್ತಿತರ ಬೇಡಿಕೆಗಳಿಗೆ ಶೀಘ್ರವಾಗಿ ಪರಿಹಾರ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಯಿತು.
ಕ್ರೀಯಾ ಸಮಿತಿ ಪದಾಧಿಕಾರಿಗಳಾದ ಸುರೇಶ್, ರವಿ, ವಿನಯ್ ಕುಮಾರ್, ಈಶ್ವರ ನಾಯ್ಕ, ಆಶೋಕ್ ಅಡ್ಯನಡ್ಕ, ನಿರ್ಮಲ, ಜ್ಯೋತಿ ನೇತೃತ್ವ ವಹಿಸಿದರು. ಕ್ರಿಯಾ ಸಮಿತಿ ಪ್ರಧಾನ ಸಂಚಾಲಕ ಬಿ.ಸೂರಜ್ ಸ್ವಾಗತಿಸಿ ವಂದಿಸಿದರು.