ಕಾಸರಗೋಡು: ಮಂಜೇಶ್ವರ ತಾಲೂಕನ್ನು ಭಾಷಾ ಅಲ್ಪಸಂಖ್ಯಾತ ತಾಲೂಕಾಗಿ ಘೋಷಿಸುವಂತೆ ಆಗ್ರಹಿಸಿ ಜನವರಿ 16ರಂದು ಉಪ್ಪಳದಲ್ಲಿ ಚಟುವಟಿಕೆ ನಡೆಸುತ್ತಿರುವ ತಾಲೂಕು ಕಚೇರಿ ಎದುರು ಬೃಹತ್ ಪ್ರತಿಭಟನಾ ಧರಣಿ ನಡೆಯಲಿರುವುದು. ಈ ಬಗ್ಗೆ ಕಾಸರಗೋಡು ಟ್ಯುಟೋರಿಯಲ್ ಕಾಲೇಜಿನಲ್ಲಿ ನಡೆದ ಕನ್ನಡ ಹೋರಾಟ ಸಮಿತಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ಮಂಜೇಶ್ವರ ತಾಲೂಕಿಗೆ ಭಾಷಾ ಅಲ್ಪಸಂಖ್ಯಾತ ಸ್ಥಾನಮಾನ ಲಭ್ಯವಾದಲ್ಲಿ, ಮುಂದಿನ ದಿವಸಗಳಲ್ಲಿ ವಿವಿಧ ಇಲಾಖೆಗಳಲ್ಲಿ ಕನ್ನಡಿಗರಿಗೆ ವಿಪುಲ ಉದ್ಯೋಗಾವಕಾಶ ಲಭಿಸಲಿದೆ. ಈ ಬಗ್ಗೆ ಪೂರಕ ವರದಿ ಈ ಹಿಂದೆ ಕಳುಹಿಸಲಾಗಿದ್ದರೂ, ಮುಖ್ಯಮಂತ್ರಿ ಕಚೇರಿಯಲ್ಲಿ ಕಡತ ವಿಲೇವಾರಿಯಾಗಿ ಉಳಿದುಕೊಂಡಿದೆ. ಈ ಬಗ್ಗೆ ಶೀಘ್ರ ತೀರ್ಮಾನ ಕೈಗೊಳ್ಳುವಂತೆ ಪ್ರತಿಭಟನೆ ಮೂಲಕ ಆಗ್ರಹ ಪಡಿಸಲು ತೀರ್ಮಾನಿಸಲಾಯಿತು. ಅಲ್ಲದೆ ಮಾಯಿಪ್ಪಾಡಿ ಡಯೆಟ್ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು.
ಕನ್ನಡ ಹೋರಾಟ ಸಮಿತಿ ಉಪಾಧ್ಯಕ್ಷ ಮಹಾಲಿಂಗೇಶ್ವರ ಭಟ್ ಅಧ್ಯಕ್ಷತೆ ವಹಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕೆ. ವಿಶ್ವನಾಥ ರಾವ್, ಡಾ. ಯು. ಮಹೇಶ್ವರೀ, ಶ್ರೀಶಕುಮಾರ್ ಪಿ, ಪ್ರಭಾವತೀ ಕೆದಿಲಾಯ ಪುಂಡೂರು, ಎಸ್.ವಿ ಭಟ್, ಗುರುಪ್ರಸಾದ್ ಕೋಟೆಕಣಿ, ಟಿ.ಶಂಕರನಾರಾಯಣ ಭಟ್, ರಘು ಮೀಪುಗುರಿ, ಉಮೇಶ್ ನಾಯ್ಕ್, ವಿಷ್ಣುಪ್ರಕಾಶ್, ಶಾಂತಕುಮಾರ್, ಕೀರ್ತಿಎ.ಎಸ್, ವಿನಾಯಕ ಎಂ ಉಪಸ್ಥಿತರಿದ್ದರು.
ಕನ್ನಡ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ. ಭಾಸ್ಕರ ಸ್ವಾಗತಿಸಿದರು. ತಾರಾನಾಥ ಮಧೂರು ವಂದಿಸಿದರು.