ಕಾಸರಗೋಡು: ಉತ್ತರ ಕೇರಳ ಮತ್ತು ದಕ್ಷಿಣ ಕರ್ನಾಟಕದ ಪರಮೋಚ್ಛ ನ್ಯಾಯ ದೇಗುಲ ಎಂದೇ ಖ್ಯಾತಿ ಪಡೆದಿರು ಕಾಸರಗೋಡು ಜಿಲ್ಲೆಯ ಕಾನತ್ತೂರು ಶ್ರೀ ನಾಲ್ವರ್ ದೈವಸ್ಥಾನದಲ್ಲಿ ವಾರ್ಷಿಕ ಕಳಿಯಾಟ ಮಹೋತ್ಸವ ನಿನ್ನೆಯಿಂದ (ಡಿಸೆಂಬರ್ 28ರಿಂದ)ಆರಂಭಗೊಂಡಿದ್ದು, ಜನವರಿ 3ರ ವರೆಗೆ ಜರುಗಲಿದೆ. ಕಳಿಯಾಟ ಮಹೋತ್ಸವದಲ್ಲಿ ಕೇರಳ ಮತ್ತು ಕರ್ನಾಟಕದ ಸಾವಿರಾರು ಮಂದಿ ಭಕ್ತಾದಿಗಳು ಬಂದು ಸೇರುತ್ತಿರುವುದಾಗಿ ದೈವಸ್ಥಾನ ಆಡಳಿತ ಸಮಿತಿ ಪದಾಧಿಕಾರಿ ಕೆ.ಪಿ ಮೋಹನನ್ ನಾಯರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ನಿನ್ನೆ ಸಂಜೆ ಶುದ್ಧಿ ಕಲಶ, ಪ್ರಾರ್ಥನೆ, ದೈವಕೋಲಧಾರಿಗಳಿಗೆ ಕರ್ತವ್ಯ ಹಂಚುವ ಕಾರ್ಯಕ್ರಮ ಜರಗಿತು. ಇಂದು ಮಧ್ಯಾಹ್ನ ಭಂಡಾರದ ಆಗಮನ, ರಾತ್ರಿ ಎಲೆಯೋರ್ ದೈವನೇಮ ನಡೆಯುವುದು. 30ರಂದು ಬೆಳಗ್ಗೆ ಚಾಮುಂಡಿ ದೈವ, ಪಂಜುರ್ಲಿ(ಉಗ್ರಮೂರ್ತಿ), ಮೂತೋರ್ ದೈವ, ರಾತ್ರಿ ಸುಡುಮದ್ದುಪ್ರದರ್ಶನ, ಬಂಬೇರಿಯ, ಮಾಣಿಚ್ಚಿ ದೈವನೇಮ ನಡೆಯುವುದು.31ರಂದು ಬೆಳಗ್ಗೆ ಚಾಮುಂಡಿ ದೈವ, ಕುಂಡಕಲೆಯ ದೈವಗಳ ಸಂಚಾರ, ಪಂಜುರ್ಲಿ(ಉಗ್ರಮೂರ್ತಿ)ದೈವ, ಪಾಷಾಣಮೂರ್ತಿ ದೈವನೇಮ ಜರುಗಲಿದೆ.
ಜನವರಿ 1ರಂದು ಬೆಳಗ್ಗೆ ರಕ್ತೇಶ್ವರೀ ದೈವ ನೇಮ, ತುಲಾಭಾರ, ಮಧ್ಯಾಹ್ನ ವಿಷ್ಣುಮೂರ್ತಿ ದೈವ ನೇಮ, ಪ್ರೇತ ವಿಮೋಚನೆ ನಡೆಯುವುದು. 2ರಂದು ಬೆಳಗ್ಗೆ 8ಕ್ಕೆ ರಕ್ತೇಶ್ವರೀ ದೈವನೇಮ, ತುಲಾಭಾರ ಸೇವೆ, ಮಧ್ಯಾಹ್ನ ವಿಷ್ಣುಮೂರ್ತಿ ದೈವಳಗ ನೇಮ, ಪ್ರೇತ ವಿಮೋಚನೆ ನಡೆಯಲರುವುದು. 3ರಂದು ಬೆಳಗ್ಗೆ ಕಳಗ ಒಪ್ಪಿಸುವುದು, ಭಂಡಾರದ ನಿರ್ಗಮನದೊಂದಿಗೆ ಕಳಿಯಾಟ ಮಹೋತ್ಸವ ಸಂಪನ್ನಗೊಳ್ಳುವುದು.
ತುಳುನಾಡಿನ ರಾಜಂದೈವ ಪೂಮಾಣಿ-ಕಿನ್ನಿಮಾಣಿ ದೈವಗಳ ಪ್ರತೀಕಗಳಾದ ಶೈವ ವಂಶದ ದೈವಗಳು ಇಲ್ಲಿ ನಾಲ್ವರ್ ದೈವಗಳು ಮತ್ತು ಈರ್ವರ್ ದೈವಗಳೆಂಬ ಹೆಸರಲ್ಲಿ ಅರಾಧಿಸಿಕೊಂಡು ಬಲಾಗುತ್ತಿದೆ. ಎಂಟು ಶತಮಾನಗಳ ಇತಿಹಾಸ ಹೊಂದಿರುವ ಈ ದೈವಸ್ಥಾನಕ್ಕೆ ಜಾತಿ, ಮತ, ದರ್ಮ ಭೇದವಿಲ್ಲದೆ ವಿಶ್ವಾಸವಿರಿಸಿ ಪ್ರತಿ ದಿನ ನೂರಾರು ಮಂದಿ ಭಕ್ತಾದಿಗಳು ಆಗಮಿಸಿ ಪ್ರಾರ್ಥನೆ ಸಲ್ಲಿಸುತ್ತಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕೆ.ಪಿ ಪವಿತ್ರನ್ ನಾಯರ್, ಕೆ.ಪಿ ಮುರಳೀಧರನ್ ಉಪಸ್ಥಿತರಿದ್ದರು.