ಮುಂಬೈ: ನನ್ನ ಹೆಸರು ರಾಹುಲ್ ಗಾಂಧಿ, ರಾಹುಲ್ ಸಾವರ್ಕರ್ ಅಲ್ಲ, ನಾನು ಸತ್ಯ ನುಡಿದಿದ್ದೇನೆ. ಬೇಕಾದರೆ ಸಾಯಲು ಸಿದ್ಧ, ಆದರೆ, ಬಿಜೆಪಿಯ ಕ್ಷಮೆ ಮಾತ್ರ ಕೇಳುವುದಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಮೊನ್ನೆ ನೀಡಿದ್ದ ಹೇಳಿಕೆ ದೇಶದಲ್ಲಿ ರಾಜಕೀಯ ಕಂಪನಗಳನ್ನೇ ಸೃಷ್ಟಿಸಿದೆ.
ಅವರ ಹೇಳಿಕೆಗಳಿಗೆ ಹಲವು ಹಿಂದೂ ಸಂಘಟನೆಗಳ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಿಂದೂಗಳು ದೇವರ ಸಮಾನವಾಗಿ ಪೂಜಿಸುವ ವೀರ್ ಸಾವರ್ಕರ್ ಅವರನ್ನು ರಾಹುಲ್ ಕೆಳಮಟ್ಟಕ್ಕಿಳಿಸುವ ಹೇಳಿಕೆ ನೀಡಿದ್ದಾರೆ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.ಈ ಕುರಿತು ವೀರ್ ಸಾವರ್ಕರ್ ಅವರ ಮೊಮ್ಮಗ ರಂಜಿತ್ ಸಾವರ್ಕರ್ ಪ್ರತಿಕ್ರಿಯಿಸಿದ್ದು, ಸಾರ್ವಕರ್ ಬಗ್ಗೆ ಹೇಳಿಕೆ ನೀಡಿರುವ ರಾಹುಲ್ ಗಾಂಧಿ ವಿರುದ್ಧ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿದ್ದಾರೆ. ಈ ಕುರಿತು ಶಿವಸೇನೆ ಮುಖ್ಯಸ್ಥ, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಜೊತೆ ಚರ್ಚಿಸುವುದಾಗಿ, ರಾಹುಲ್ ಹೇಳಿಕೆಯನ್ನು ಖಂಡಿಸುವಂತೆ ಠಾಕ್ರೆ ಅವರನ್ನು ಕೋರುವುದಾಗಿ ಪ್ರಕಟಿಸಿದ್ದಾರೆ.ಭಾನುವಾರ ಮುಂಬೈನಲ್ಲಿ ಪ್ರತಿಭಟನಾ ಸಮಾವೇಶ ಆಯೋಜಿಸಿ ಮಾತನಾಡಿದ ರಂಜಿತ್ ಸಾರ್ವಕರ್, ಶಿವಸೇನೆ ಹಿಂದುತ್ವ ಸಿದ್ಧಾಂತಕ್ಕೆ ಕಟಿಬದ್ದವಾಗಿರಬೇಕು. ಕಾಂಗ್ರೆಸ್ ಜೊತೆಗಿನ ಸ್ನೇಹವನ್ನು ಕಡಿತಗೊಳಿಸಿಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು. ಉದ್ಧವ್ ಠಾಕ್ರೆ ತಮ್ಮ ಸಂಪುಟದಲ್ಲಿರುವ ಕಾಂಗ್ರೆಸ್ ಮಂತ್ರಿಗಳನ್ನು ಕೂಡಲೇ ವಜಾಗೊಳಿಸಬೇಕು ಎಂದು ಅವರು ಆಗ್ರಹಿಸಿದರು. ರಾಹುಲ್ ಗಾಂಧಿ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿದ ರಂಜಿತ್ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ಯೋಧರನ್ನು ಗೌರವಿಸಲು ಕಲಿಯಬೇಕೆಂದು ಸಲಹೆ ನೀಡಿದರು
ರಾಹುಲ್ ಸಾವರ್ಕರ್ ಹೇಳಿಕೆ ವಿರುದ್ದ ಶಿವಸೇನೆ ಈಗಾಗಲೇ ಪ್ರತಿಕ್ರಿಯಿಸಿದೆ. ಶಿವಸೇನೆ ಸಂಸದ ಸಂಜಯ್ ರಾವತ್ ತಮ್ಮ ಪಕ್ಷ ಹಿಂದುತ್ವ ಸಿದ್ಧಾಂತಗಳ ಬಗ್ಗೆ ಯಾವುದೇ ರಾಜಿಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ವೀರ್ ಸಾವರ್ಕರ್ ಮಹಾರಾಷ್ಟ್ರಕ್ಕೆ ಮಾತ್ರವಲ್ಲ ಇಡೀ ದೇಶಕ್ಕೆ ಆದರ್ಶ ಪ್ರಾಯ ವ್ಯಕ್ತಿ. ಮಹಾತ್ಮ ಗಾಂಧಿ ಹಾಗೂ ಜವಹರಲಾಲ್ ನೆಹರೂ ಅವರಂತೆ ವೀರ್ ಸಾವರ್ಕರ್ ದೇಶಕ್ಕಾಗಿ ತಮ್ಮ ಬದುಕು ತ್ಯಾಗ ಮಾಡಿದ್ದಾರೆ ಅಂತಹ ದೇಶ ಭಕ್ತರನ್ನು ಗೌರವಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲೂ ಇದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.