HEALTH TIPS

ಬದಿಯಡ್ಕದಲ್ಲಿ ಶುಚೀಕರಣ ಯಜ್ಞ- ಪೊಡಿಪ್ಪಳ್ಳ ಶ್ರೀ ಚೀರುಂಬಾ ಭಗವತೀ ಕ್ಷೇತ್ರದ ಪ್ರಾದೇಶಿಕ ಸಮಿತಿಯ ನೇತೃತ್ವ


        ಬದಿಯಡ್ಕ: ಪೊಡಿಪ್ಪಳ್ಳ ಶ್ರೀ ಚೀರುಂಬಾ ಭಗವತೀ ಕ್ಷೇತ್ರದ ಬದಿಯಡ್ಕ ಪ್ರಾದೇಶಿಕ ಸಮಿತಿಯ ವತಿಯಿಂದ ಭಾನುವಾರ ಬದಿಯಡ್ಕ ಪೇಟೆಯಲ್ಲಿ ಶುಚೀಕರಣ ಯಜ್ಞವನ್ನು ಹಮ್ಮಿಕೊಳ್ಳಲಾಗಿತ್ತು. ಸಮುದಾಯ ಸಂಘಟನೆಯ ನೂರಾರು ಮಂದಿ ಕಾರ್ಯಕರ್ತರು ಬೆಳಗಿನ ಜಾವವೇ ಒಂದುಗೂಡಿ ಪೇಟೆ ಶುಚೀಕರಣಕ್ಕೆ ತೊಡಗಿದ್ದರು. ಪೇಟೆಯ ವಿವಿಧ  ಭಾಗಗಳಲ್ಲಿ ತುಂಬಿಕೊಂಡಿದ್ದ ಕಸದ ರಾಶಿಯನ್ನು ಬುಟ್ಟಿ ಹಾಗೂ ಗೋಣಿಚೀಲಗಳಲ್ಲಿ ತುಂಬಿಸಿ ವಾಹನಗಳ ಮೂಲಕ ಸೂಕ್ತ ಸ್ಥಳಕ್ಕೆ ರವಾನಿಸಿದರು. ಗಂಡಸರ ಜೊತೆಯಲ್ಲಿ ಮಹಿಳೆಯರೂ ಮಕ್ಕಳೂ ಶುಚೀಕರಣಕ್ಕೆ ಸಾಥ್ ನೀಡಿದರು. ಮುಳ್ಳು ಪೊದೆಗಳನ್ನು ತೆರವುಗೊಳಿಸಲು ಹುಲ್ಲುಕಟಾವು ಯಂತ್ರವನ್ನು ಉಪಯೋಗಿಸಲಾಯಿತು.
      ಬದಿಯಡ್ಕ ಬಸ್ ನಿಲ್ದಾಣದ ಪರಿಸರದಲ್ಲಿ ವ್ಯಾಪಕವಾಗಿ ಕಸದ ರಾಶಿಯೇ ಬಿದ್ದಿತ್ತು. ಪ್ಲಾಸ್ಟಿಕ್ ಕವರ್‍ಗಳಲ್ಲದೆ ಗುಟ್ಕಾದ ಪ್ಯಾಕೆಟ್‍ಗಳ ರಾಶಿಯಿತ್ತು. ಗುಟ್ಕಾಕ್ಕೆ ನಿಷೇಧವಿದ್ದರೂ ವ್ಯಾಪಕ ಪ್ರಮಾಣದಲ್ಲಿ ಬದಿಯಡ್ಕದಲ್ಲಿ ಮಾರಾಟಗೊಳ್ಳುತ್ತಿದೆ ಎಂಬುದನ್ನು ಈ ಕಸದ ರಾಶಿಯೇ ಸಾಕ್ಷಿಯನ್ನು ಹೇಳುವಂತಿತ್ತು. ಬಸ್ ನಿಲ್ದಾಣದ ಮುಂಭಾಗ, ಪೇಟೆಯ ಪ್ರಧಾನ ವೃತ್ತ ಹಾಗೂ ಪರಿಸರ ಪ್ರದೇಶದ ಕಸಗಳನ್ನು ಕ್ಷಣಮಾತ್ರದಲ್ಲಿ ನೂರಾರು ಕಾರ್ಯಕರ್ತರು ತೆರವುಗೊಳಿಸಿ ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ತೋರಿಸಿಕೊಟ್ಟರು.
      ಬಸ್ ನಿಲ್ದಾಣದ ಪರಿಸರದಲ್ಲಿ ನಡೆದ ಸಭಾಕಾರ್ಯಕ್ರಮದಲ್ಲಿ ಬದಿಯಡ್ಕ ಗ್ರಾಮಪಂಚಾಯಿತಿ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಮಾತನಾಡಿ, ಸಮುದಾಯ ಸಂಘಟನೆಗಳು ಶುಚೀಕರಣಕ್ಕೆ ಆದ್ಯತೆಯನ್ನು ನೀಡಿ ಪೇಟೆ ಶುಚೀಕರಣ ನಡೆಸಲು ಮನ ಮಾಡಿರುವುದು ಶ್ಲಾಘನೀಯವಾಗಿದ್ದು ಎಲ್ಲರಿಗೂ ಮಾದರಿಯಾಗಿದ್ದಾರೆ. ಇಂತಹ ಕಾರ್ಯಗಳು ನಿರಂತರವಾಗಿ ನಾಡಿನೆಲ್ಲೆಡೆ ನಡೆದರೆ ಆರೋಗ್ಯಪೂರ್ಣವಾದ ಜೀವನ ನಮ್ಮದಾಗಲಿದೆ ಎಂದರು.
      ಬದಿಯಡ್ಕ ಗ್ರಾಮಪಂಚಾಯಿತಿ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಅನ್ವರ್ ಓಸೋನ್ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯ ಜಿಲ್ಲಾ ಉಪಾಧ್ಯಕ್ಷ ಎಸ್.ಎನ್.ಮಯ್ಯ ಬದಿಯಡ್ಕ ಮಾತನಾಡಿ ಮಾಲಿನ್ಯಮುಕ್ತ ಪರಿಸರವೆಂಬ ಸಂಕಲ್ಪವನ್ನು ತೊಟ್ಟು ಕೈಗೊಂಡ ಕಾರ್ಯವು ಮಾದರಿಯಾಗಿದೆ. ಹೆತ್ತ ತಾಯಿ ಹೊತ್ತ ಭೂಮಿಯನ್ನು ರಕ್ಷಿಸುವ ಹೊಣೆ ನಮ್ಮದು ಎಂಬ ಅರಿವನ್ನು ಮೂಡಿಸುವ ಕಾರ್ಯಕ್ರಮ ಇದು ಎಂದರು.
      ಬದಿಯಡ್ಕ ಸಮುದಾಯ ಆರೋಗ್ಯ ಕೇಂದ್ರ ಅಧಿಕಾರಿ ದೇವಿಜಾಕ್ಷನ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಪ್ಲಾಸ್ಟಿಕ್‍ನಿಂದ ಉಂಟಾಗುವ ದೋಷಗಳಿಂದಾಗಿ ಭೂಮಿಯಲ್ಲಿ ಬಿತ್ತಿದ ಬೀಜವೇ ಮೊಳಕೆಯೊಡೆಯದ ಪರಿಸ್ಥಿತಿ ನಿರ್ಮಾಣವಾಗಿದೆ. ಶುಚಿತ್ವವಿದ್ದಲ್ಲಿ ಮಾತ್ರ ಆರೋಗ್ಯವಿರುತ್ತದೆ ಎಂಬುದನ್ನು ಎಲ್ಲರೂ ಮನಗಾಣಬೇಕು. ಪ್ಲಾಸ್ಟಿಕ್‍ನಿಂದಾಗಿ ಇಂದು ಪರಿಸರವು ಹಾನೀಗೀಡಾಗುತ್ತಿದೆ. ಈ ವಿಷಕರ ವಸ್ತುವನ್ನು ನಾನು ಉಪಯೋಗಿಸುವುದಿಲ್ಲವೆಂದು ಎಲ್ಲರೂ ಪ್ರತಿಜ್ಞೆ ಕೈಗೊಳ್ಳಬೇಕಾಗಿದೆ. ಇಂತಹ ಮಾದರಿ ಕಾರ್ಯಗಳು ಎಲ್ಲೆಂದರಲ್ಲಿ ಕಸ, ಮಾಲಿನ್ಯಗಳನ್ನು ಎಸೆಯುವವರಿಗೆ ಪಾಠವಾಗಬೇಕು ಎಂದರು. ಬ್ಲೋಕ್ ಪಂಚಾಯಿತಿ ಸದಸ್ಯ ಅವಿನಾಶ್ ರೈ ವಳಮಲೆ, ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯ ಬದಿಯಡ್ಕ ಯೂನಿಟ್ ಅಧ್ಯಕ್ಷ ಕುಂಜಾರು ಮುಹಮ್ಮದ್ ಹಾಜಿ, ನರೇಂದ್ರ ಬದಿಯಡ್ಕ, ಪೊಡಿಪ್ಪಳ್ಳ ಶ್ರೀ ಚೀರುಂಬಾ ಭಗವತಿ ಕ್ಷೇತ್ರದ ರಾಮ ಮಾಸ್ಟರ್ ಇಕ್ಕೇರಿ ಶುಭಹಾರೈಸಿದರು. ರವಿ ನವಶಕ್ತಿ ಸ್ವಾಗತಿಸಿ, ಸುಧಾಕರ ವಂದಿಸಿದರು. ವಸಂತ ಅರ್ತಿಪಳ್ಳ, ಅಶೋಕನ್, ಚಂದ್ರ ಚೆನ್ನಾರಕಟ್ಟೆ, ಶಶಿಧರ ಚೇಡಿಕ್ಕಾನ, ಪುಷ್ಪಾ ಬದಿಯಡ್ಕ, ಮಮತ ಇಕ್ಕೇರಿ, ಶರಣ್ಯ ಬದಿಯಡ್ಕ ಮೊದಲಾದವರು ನೇತೃತ್ವವನ್ನು ನೀಡಿದ್ದರು. ಬದಿಯಡ್ಕ ಪೇಟೆಯ ವ್ಯಾಪಾರಿಗಳು ಪಾನೀಯ, ನೀರು ನೀಡಿ ಸಹಕರಿಸಿದರು.
          ಬದಿಯಡ್ಕ ಪ್ರಾದೇಶಿಕ ಸಮಿತಿಯ ನೂರಾರು ಕಾರ್ಯಕರ್ತರು ಅತ್ಯುತ್ಸಾಹದಲ್ಲಿ ಶುಚಿತ್ವ ಯಜ್ಞದಲ್ಲಿ ಪಾಲ್ಗೊಂಡಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries