ಮುಳ್ಳೇರಿಯ: ಸ್ವಾರ್ಥವನ್ನು ಬಿಟ್ಟು ನಿತ್ಯ ನಿರಂತರ ದೇವರ ಸ್ಮರಣೆಯನ್ನು ಮಾಡಿ ಜೀವನವನ್ನು ಪಾವನಗೊಳಿಸೋಣ. ದೇವಾಲಯಗಳು ಶಕ್ತಿಯ ಕೇಂದ್ರಗಳು; ಅಲ್ಲಿ ಪ್ರಾರ್ಥಿಸಿದಾಗ ನಮ್ಮ ಋಣಾತ್ಮಕತೆ ಮಾಯವಾಗಿ ಧನಾತ್ಮಕತೆ ತುಂಬಿಕೊಳ್ಳುತ್ತದೆ ಎಂದು ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಹೇಳಿದರು.
ಅವರು ಬ್ರಹ್ಮಶ್ರೀ ವಾಸುದೇವ ತಂತ್ರಿಯವರ ಮಾರ್ಗದರ್ಶನದಲ್ಲಿ ನಡೆದ ಗಾಳಿಮುಖ ಶಕ್ತಿನಗರ ಶ್ರೀ ಅಯ್ಯಪ್ಪಸ್ವಾಮಿ ಭಜನಾ ಮಂದಿರದ ಪ್ರಥಮ ಪ್ರತಿಷ್ಠಾ ವಾರ್ಷಿಕೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಧಾರ್ಮಿಕ ಭಾಷಣಗೈದು ಮಾತನಾಡಿದರು.
ದೇವರ ಸೇವೆ ಮಾಡಿದರೆ ನಮ್ಮ ಸೇವೆಗಳನ್ನು ಮನುಷ್ಯನಾದವ ಗಮನಿಸದಿದ್ದರೂ ಗರ್ಭಗುಡಿಯಲ್ಲಿರುವ ದೇವರ ಗಮನಿಸುತ್ತಾನೆ. ಆ ಪುಣ್ಯದ ಫಲವನ್ನು ನಮ್ಮ ಖಾತೆಗೆ ಜಮಾ ಮಾಡುತ್ತಾನೆ. ಇಲ್ಲಿ ಯಾವುದೇ ಮಧ್ಯವರ್ತಿಗಳಿಲ್ಲ. ಅಯ್ಯಪ್ಪ ವ್ರತಧಾರಿಗಳು ತಮ್ಮ ಜೀವನದುದ್ದಕ್ಕೂ ಕೆಟ್ಟಚಟವನ್ನೆಲ್ಲಾ ಬಿಟ್ಟು ಸನ್ನಡತೆಯ ವ್ರತವನ್ನು ಕೈಗೊಂಡು ಸಮಾಜದ ದೃಷ್ಟಿಯಲ್ಲಿಯೂ ತ್ಯಾಗಿಗಳಾಗಿ ಜೀವಿಸಬೇಕು ಎಂದು ಅವರು ಹೇಳಿದರು.
ಮಂದಿರ ಸಮಿತಿ ಅಧ್ಯಕ್ಷ ಕೊರಗಪ್ಪ ಪೂಜಾರಿ ಅಧ್ಯತೆ ವಹಿಸಿದ್ದರು. ಮಂದಿರದ ಹಿರಿಯ ಗುರುಸ್ವಾಮಿ ಕೆ.ವಿ.ಚಂದು ಅವರಿಗೆ ಮಂದಿರದ ಗುರುಸ್ವಾಮಿ ಕೆ.ವಿ.ಶಶಿಧರ ಮತ್ತು ಶಿಷ್ಯವೃಂದದವರಿಂದ ಗುರುವಂದನೆ ನಡೆಯಿತು. ಯಾದವ ಗುರುಸ್ವಾಮಿ, ಎಂಸಿ ನಾಯರ್ ಗುರುಸ್ವಾಮಿ, ಕೃಷ್ಣ್ ಗುರುಸ್ವಾಮಿ ಪಾಂಡಿ, ಕುಂಞಂಬು ಗುರುಸ್ವಾಮಿ ಎರಿಂಜೇರಿ ಉಪಸ್ಥಿತರಿದ್ದರು.
ಸುಶ್ಮಿತಾ ಶಕ್ತಿನಗರ ಪ್ರಾರ್ಥನೆ ಹಾಡಿದರು. ಮಂದಿರ ಸಮಿತಿ ಅಧ್ಯಕ್ಷ ಜಯಕುಮಾರ ಸ್ವಾಗತಿಸಿದರು. ಕೋಶಾಧಿಕಾರಿ ಗೋಪಾಲಕೃಷ್ಣ ವಂದಿಸಿದರು. ಪ್ರಕಾಶ್ ಮಾಸ್ತರ್ ಕಾರ್ಯಕ್ರಮ ನಿರೂಪಿಸಿದರು.