ಕುಂಬಳೆ: ಗಡಿನಾಡು ಕಾಸರಗೋಡಿನ ಭಾಷಾ ಅಲ್ಪಸಂಖ್ಯಾತರ ಕಲಾ-ಸಾಂಸ್ಕøತಿಕ ಕನಸುಗಳನ್ನು ನನಸಾಗಿಸುವ ನಿಟ್ಟಿನಲ್ಲಿ ಮಂಜೇಶ್ವರ ತಾಲೂಕಿನ ಕಡಂಬಾರಿನ ದುರ್ಗಿಪಳ್ಳದಲ್ಲಿ ಕೇರಳ ತುಳು ಅಕಾಡೆಮಿಯ ತುಳು ಭವನ ನಿರ್ಮಾಣವಾಗುತ್ತಿದೆ. ಈ ತಿಂಗಳ ಕೊನೆಯಲ್ಲಿ ನಿರ್ಮಾಣ ಪೂರ್ಣಗೊಳ್ಳಲಿದ್ದು, ಜನವರಿಯಲ್ಲಿ ಸಂಸ್ಥೆಯ ಉದ್ಘಾಟನೆ ಸಮಾರಂಭ ಜರಗುವುದು ಎಂದು ಕೇರಳ ತುಳು ಅಕಾಡೆಮಿಯ ಅಧ್ಯಕ್ಷ ಉಮೇಶ್ ಎಂ.ಸಾಲ್ಯಾನ್ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯ ಸರ್ಕಾರದ ಒಂದು ಸಾವಿರ ದಿನ ಪೂರ್ಣ ಆಚರಣೆಯ ಅಂಗವಾಗಿ ತುಳುಭವನದ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು. ಕಳೆದ ಫೆಬ್ರವರಿ ತಿಂಗಳಲ್ಲಿ ರಾಜ್ಯ ವಿಧಾನಸಭೆ ಸ್ಪೀಕರ್ ಪಿ.ಶ್ರೀರಾಮಕೃಷ್ಣನ್ ಶಿಲಾನ್ಯಾಸ ನಡೆಸಿದ್ದರು. ತುಳುಭವನ ನಿರ್ಮಾಣಕ್ಕಾಗಿ ರಾಜ್ಯ ಸರ್ಕಾರ 25 ಲಕ್ಷ ರೂ. ಮಂಜೂರು ಮಾಡಿತ್ತು. ಜಿಲ್ಲಾ ನಿರ್ಮಿತಿ ಕೇಂದ್ರ ನಿರ್ಮಾಣ ಚಟುವಟಿಕೆಗಳ ನೇತೃತ್ವ ವಹಿಸಿದೆ.