ಕುಂಬಳೆ: ಆಧುನಿಕ ಜಗತ್ತಿನ ವೇಗದ ಮಧ್ಯೆ ನಮ್ಮೊಡನೆ ಬದುಕುವ ಜೀವಕೋಟಿಗಳ, ಪರಿಸರದ ಪರಿಕಲ್ಪನೆ ಮಕ್ಕಳಲ್ಲಿ ವಿರಳಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಈ ಬಗ್ಗೆ ಜಾಗೃತಿ ಮೂಡಿಸುವ ಅಧ್ಯಯನ ಪಯಣ ಇತ್ತೀಚೆಗೆ ಕುಂಬಳೆ ಪರಿಸರದಲ್ಲಿ ಆಯೋಜಿಸಲಾಗಿತ್ತು.
ಹಾರುವ ಜೇಡ,ಕುಣಿಯುವ ಹುಳ,ಎಣಿಸಲು ಸಾಧ್ಯವಾಗದಷ್ಟು ಮೊಟ್ಟೆ ಇಟ್ಟ ಕೀಟ,ಬಣ್ಣ ಬಣ್ಣದ ಇರುವೆ,ಎಲೆಯ ಅಡಿ ಭಾಗದಲ್ಲೂ ಗೂಡು, ಸುರುಟಿಕೊಂಡು ವಿಶ್ರಾಂತಿ ಪಡೆಯುವ ಜೀವಿ.......ಹೀಗೆ ಕೀಟ ಪ್ರಪಂಚದ ಹಲವು ಕೌತುಕಗಳು ಮಕ್ಕಳ ಗಮನ ಸೆಳೆದವು. ಮಾತ್ರವಲ್ಲ ಜೀವ ಜಗತ್ತಿನ ಚಿತ್ರ ವಿಚಿತ್ರ ಅಚ್ಚರಿಗಳನ್ನು ಹುಡುಕಾಟ ನಡೆಸಿ ನವೀನ ಮಾಹಿತಿಗಳನ್ನು ಸಂಗ್ರಹಿಸಿಕೊಂಡರು.
ಇದಕ್ಕಾಗಿ.......ಕುಂಬಳೆ ಕಂಚಿಕಟ್ಟೆ ಪ್ರದೇಶದ ಭತ್ತದ ಗದ್ದೆಗಳು,ಕಾಂಡ್ಲಾ ಕಾಡು,ನದೀ ತೀರ ಹಾಗೂ ತೆಂಗು-ಕಂಗಿನ ತೋಟಗಳೆಡೆಯಲ್ಲಿ ಮಕ್ಕಳ ಅಧ್ಯಯನವು ಸಾಗಿತ್ತು.ಈ ನಡುವೆ ಚಿಟ್ಟೆ-ಹಕ್ಕಿಗಳನ್ನು,ಗಿಡ ಮರ ಬಳ್ಳಿಗಳನ್ನೂ ಪರಿಚಯ ಮಾಡಿಕೊಂಡರು.
ಕುಂಬಳೆ ಹೋಲಿ ಫ್ಯಾಮಿಲಿ ಶಾಲೆಯ ಜೈವ ವೈವಿಧ್ಯ ಸಂಘದ ನೇತೃತ್ವದಲ್ಲಿ ಜರುಗಿದ ಪರಿಸರ ಪಠನದಲ್ಲಿ ಕಾಸರಗೋಡು ಪಕ್ಷಿ ಪ್ರೇಮಿ ತಂಡದ ಸ್ಥಾಪಕ ಅಧ್ಯಕ್ಷರಾದ ಮ್ಯಾಕ್ಸಿಂ ಕೊಲ್ಲಂಗಾನ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾಹಿತಿ ಹಂಚಿಕೊಂಡರು.ಅಧ್ಯಾಪಕ ರಾಜು ಕಿದೂರು ಮಾರ್ಗದರ್ಶನ ನೀಡಿದರು.
ಕುಂಬಳೆ ನದಿ ತೀರದಲ್ಲಿ ತಮ್ಮ ಕೃಷಿ ಜೀವನದ ಅನುಭವವನ್ನು ಹಂಚಿದ ಮಳಿ ಪ್ರದೇಶದ ಚಂದ್ರಶೇಖರ ಹಾಗೂ ರಕ್ಷಕ ಶಿಕ್ಷಕ ಸಂಘದ ಸದಸ್ಯರಾದ ಆನಂದ ತಮ್ಮ ಮನೆಯಲ್ಲಿ ಮಕ್ಕಳಿಗೆ ಊಟೋಪಚಾರದ ವ್ಯವಸ್ಥೆ ಮಾಡಿದರು. ಜೈವ ವೈವಿಧ್ಯ ಸಂಘದ ಸದಸ್ಯ ಮಹೇಶ್ವರ ವಂದಿಸಿದನು.