ಕಾಸರಗೋಡು: ಜನಪರ ಸಹಕಾರದೊಂದಿಗೆ ಬಂಜರು ಭೂಮಿಯಲ್ಲಿ ಹಸನಾದ ಕೃಷಿ ನಡೆಸಿ ಯಶೋಗಾಥೆ ರಚಿಸಿದ ಬೇಡಡ್ಕ ಗ್ರಾಮಪಂಚಾಯತನ್ನು "ಬಂಜರು ಭೂಮಿ ರಹಿತ ಗ್ರಾಮಪಂಚಾಯತ್" ಎಂದು ಘೋಷಿಸಲಾಗಿದೆ.
ಹರಿತ ಕೇರಳಂ ಮಿಷನ್ ನ ಬಂಜರು ರಹಿತ ಗ್ರಾಮಪಂಚಾಯತ್ ಯೋಜನೆಯಲ್ಲಿ ಅಳವಡಿಸಿ ಇಲ್ಲಿ ಕೃಷಿ ನಡೆಸಿ ಯಶಸ್ಸು ಕಾಣಲಾಗಿತ್ತು.
ಈ ಸಂಬಂಧ ಬುಧವಾರ ಕುಡಂಕುಳಿ ಶ್ರೀ ಪಂಚಲಿಂಗೇಶ್ವರ ದೇವಾಲಯದ ವೈಕುಂಠಂ ಸಭಾಂಗಣದಲ್ಲಿ ನಡೆದ ಕೃಷಿಕೋತ್ಸವ ಸಮಾರಂಭದಲ್ಲಿ ಹರಿತ ಕೇರಳಂ ರಾಜ್ಯ ಕಾರ್ಯಕಾರಿ ಉಪಾಧ್ಯಕ್ಷೆ ಡಾ.ಟಿ.ಎನ್.ಸೀಮಾ ಅವರು ಬೇಡಡ್ಕವನ್ನು "ಬಂಜರು ಭೂಮಿ ರಹಿತ ಗ್ರಾಮಪಂಚಾಯತ್ " ಎಂದು ಘೋಷಿಸಿದರು. ಕೃಷಿ ಉತ್ಪನ್ನಗಳ ಮಾರಾಟ ಮೇಳದ ಉದ್ಘಾಟನೆಯನ್ನೂ ಅವರು ನೆರವೇರಿಸಿದರು.
ಪಿ.ಎ.ಒ. ಮಧು ಜಾರ್ಜ್ ಮತ್ತಾಯಿ ಅವರು ಬೇಡಡ್ಕ ಗ್ರಾಮಪಂಚಾಯತ್ ನ ಉತ್ಪನ್ನವಾಗಿರುವ "ಬೇಡಗಂ ಅಕ್ಕಿ"ಯ ಮೊದಲ ಮಾರಾಟ ನಡೆಸಿದರು. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಬಂಜರು ರಹಿತ ಗ್ರಾಮ ಸಂಬಂಧ ವರದಿ ಬಿಡುಗಡೆಗೊಳಿಸಿದರು. ಕೃಷಿ ಸಾಧಕರನ್ನು, ಕೃಷಿ ಗುಂಪುಗಳನ್ನು, ಕೃಷಿ ಸಂಸ್ಥೆಗಳನ್ನು, ಕೃಷಿ ಉತ್ಪನ್ನಗಳಿಂದ ಕಲಾಕೃತಿ ರಚಿಸಿದವರಿಗೆ, ಹಸುರುಸಂಹಿತೆಯ ಪಾಲನೆಯೊಂದಿಗೆ ಉಪಜಿಲ್ಲಾ ಶಾಲಾ ಕಲೋತ್ಸವ ನಡೆಸಿದ ಕೊಳತ್ತೂರು ಶಾಲೆಗೆ ಅಭಿನಂದನೆ ನಡೆದುವು.
ಕಾರಡ್ಕ ಬ್ಲಾಕ್ ಪಂಚಾಯತ್ ಅಧ್ಯಕ್ಷೆ ಓಮನಾ ರಾಮಚಂದ್ರನ್, ಹರಿತ ಕೇರಳಂ ಮಿಷನ್ ತಾಂತ್ರಿಕ ಅಧಿಕಾರಿ ಹರಿಪ್ರಿಯಾ ದೇವಿ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಇ.ಪದ್ಮಾವತಿ, ಸದಸ್ಯ ಎನ್.ಪ್ರದೀಪನ್, ಹರಿತ ಕೇರಳಂ ಮಿಷನ್ ಜಿಲ್ಲಾ ಸಂಚಾಲಕ ಎಂ.ಪಿ.ಸುಬ್ರಹ್ಮಣ್ಯನ್, ಎಂ.ಜಿ.ಎಲ್.ಆರ್.ಇ.ಜಿ. ಯೋಜನೆ ನಿರ್ದೇಶಕ ಕೆ.ಪ್ರದೀಪನ್, ಗ್ರಾಮಪಂಚಾಯತ್ ಸದಸ್ಯರು ಮೊದಲಾದವರು ಉಪಸ್ಥಿತರಿದ್ದರು.