ಪೆರ್ಲ: ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರ್ಕಾರಿ ಕಾಲೇಜಿನ ನೇತೃತ್ವದಲ್ಲಿ ನಿಸರ್ಗ ಬೆದ್ರಂಪಳ್ಳದ ಪ್ರಯೋಜಕತ್ವದಲ್ಲಿ ಮಂಜೇಶ್ವರ, ಕಾಸರಗೋಡು ಸರ್ಕಾರಿ ಕಾಲೇಜು ಹಾಗೂ ಪೆರ್ಲ ನಾಲಂದ ಕಾಲೇಜಿನ ಎನ್ನೆಸ್ಸೆಸ್ ಘಟಕ ಹಾಗೂ ಭೂಮಿತ್ರಸೇನಾ ಕ್ಲಬ್ ಗಳ ಸಹಕಾರದೊಂದಿಗೆ ಬೆದ್ರಂಪಳ್ಳ ನಿಸರ್ಗದಲ್ಲಿ ನಡೆದ ಜೈವ ವೈವಿಧ್ಯ ಶಿಬಿರದ ಎರಡನೇ ದಿನ ಬ್ರಿಟಿಷರ ಕಾಲಘಟ್ಟದಲ್ಲಿ ನಿರ್ಮಿತ ಸಿರಿಯಾ ಅಣೆಕಟ್ಟನ್ನು ವೀಕ್ಷಣೆ ಮಾಡಲಾಯಿತು.
ಶಿಬಿರದ ಸಂಯೋಜಕ ಮೊಹಮ್ಮದ್ ಅಲಿ ಮಾತನಾಡಿ, ತೋಡು ನದಿಗಳು ಜೈವ ವೈವಿಧ್ಯತೆಯ ಅವಿಭಾಜ್ಯ ಅಂಗಗಳು. ಶುದ್ಧ ನೀರಿನ ಆಗಾರವಾಗಿದ್ದ ಈ ಜಲಮೂಲಗಳು ಕಲುಷಿತಗೊಂಡಿದ್ದು, ಮಾಲಿನ್ಯದ ಆಗಾರವಾಗಿ ಮಾರ್ಪಾಡಾಗಿದೆ ಎಂದರು. ಜಲ ಮೂಲಗಳಲ್ಲಿ ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯಗಳು ತುಂಬಿರುವುದರಿಂದ ಹಾಗೂ ಅಕ್ರಮ ಮರಳು ಸಾಗಣಿಕೆಯ ಫಲವಾಗಿ ನೀರಿನಲ್ಲಿನ ಜೈವ ವೈವಿಧ್ಯತೆ ನಶಿಸಿ ಹೋಗುತ್ತಿದೆ. ಈ ಹಿನ್ನೆಲೆಯಲ್ಲಿ ಜೈವ ವೈವಿಧ್ಯತೆಯ ಸಂರಕ್ಷಣೆಗಾಗಿ ಮಲಿನಗೊಂಡ ಜಲಮೂಲಗಳನ್ನು ಪುನಃಸ್ಥಿತಿಗೆ ತರುವ ಕಾರ್ಯ ನಡೆಯಬೇಕಿದೆ ಹಾಗೂ ಜಲಮೂಲಗಳನ್ನು ಮಲಿನಗೊಳಿಸಲಾರೆ ಎಂಬ ಪ್ರತಿಜ್ಞೆ ಪ್ರತಿಯೊಬ್ಬನು ಕೈಗೊಳ್ಳಬೇಕಿದೆ ಎಂದರು.
ಶಿಬಿರಾರ್ಥಿಗಳು ಹಾಗೂ ಶಿಬಿರ ಸಂಯೋಜಕ ಮೊಹಮ್ಮದ್ ಅಲಿ, ಮಾಜಿ ಎನ್ನೆಸ್ಸೆಸ್ ಕಾರ್ಯದರ್ಶಿ ಸಯ್ಯದ್ ತಾಹ ಮೊದಲಾದವರು ಉಪಸ್ಥಿತರಿದ್ದರು.