ಕಾಸರಗೋಡು: ರೆವೆನ್ಯೂ ರಿಕವರಿ ಅದಾಲತ್ ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜರುಗಿತು. ಜಿಲ್ಲಾ ಕಂದಾಯ ಇಲಾಖೆ ಮತ್ತು ಕೇರಳ ಗ್ರಾಮೀಣ ಬ್ಯಾಂಕ್ ಜಂಟಿ ವತಿಯಿಂದ ಅದಾಲತ್ ನಡೆಯಿತು.
ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅದಾಲತ್ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಫಲಾನುಭವಿಗಳು ಅದಾಲತ್ ಮುಖೇನ ಲಭಿಸುವ ಸೌಲಭ್ಯವನ್ನು ಗರಿಷ್ಠ ಮಟ್ಟದಲ್ಲಿ ಸದುಪಯೋಗ ಪಡಿಸಿಕೊಂಡು ಜಪ್ತಿಯಂಥಾ ಕಾನೂನು ಕ್ರಮಗಳಿಂದ ಮುಕ್ತಿ ಪಡೆಯಬೇಕು ಎಂದವರು ಆಗ್ರಹಿಸಿದರು.
ಕೇರಳ ಗ್ರಾಮೀಣ ಬ್ಯಾಂಕ್ ಸಾಲ ಪಡೆದು, ಮರುಪಾವತಿ ನಡೆಸಲು ಸಾಧ್ಯವಾಗದೇ ಇದ್ದ ಹಿನೆಲೆಯಲ್ಲಿ ಜಪ್ತಿ ಕ್ರಮ ಎದುರಿಸುತ್ತಿರುವ ಜಿಲ್ಲೆಯ ಮಂದಿಗಾಗಿ ಈ ಅದಾಲತ್ ನಡೆಸಲಾಯಿತು. ಬ್ಯಾಂಕ್ ನ ಜಿಲ್ಲೆಯ 12 ಶಾಖೆಗಳ ಪ್ರಬಂಧಕರು ಅದಾಲತ್ ಗೆ ಹಾಜರಾಗಿದ್ದರು. ಬ್ಯಾಂಕ್ ಪ್ರಧಾನ ಪ್ರಬಂಧಕ ಗೋವಿಂದ್ ಹರಿನಾರಾಯಣನ್, ಕಾಸರಗೋಡು ವಲಯ ಪ್ರಬಂಧಕ ಬಾಪ್ಟಿ ನಿಥೀರಿ, ಕಾಸರಗೋಡು ಪ್ರಧಾನ ಪ್ರಬಂಧಕ ಪಿ.ವಿ.ಸುರೇಂದ್ರನ್ ಉಪಸ್ಥಿತರಿದ್ದರು. ಸಹಾಯಕ ಜಿಲ್ಲಾಧಿಕಾರಿ ಪಿ.ಆರ್.ರಾಧಿಕಾ ಸ್ವಾಗತಿಸಿದರು.
ರೆವೆನ್ಯೂ ರಿಕವರಿ ಅದಾಲತ್: 180 ಅರ್ಜಿಗಳ ಪರಿಶೀಲನೆ:
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಜರುಗಿದ ರೆವೆನ್ಯೂ ರಿಕವರಿ ಅದಾಲತ್ ನಲ್ಲಿ 180 ಅರ್ಜಿಗಳು ಲಭಿಸಿದ್ದುವು. ಇವುಗಳಲ್ಲಿ 104 ಪ್ರಕರಣಗಳಿಗೆ ತೀರ್ಪು ಒದಗಿಸಲಾಗಿದೆ. ಮರುಪಾವತಿಯನ್ನು ಫೆ.29ರ ಮುಂಚಿತವಾಗಿ ಪಾವತಿಸುವಂತೆ ತೀರ್ಪಿನಲ್ಲಿ ತಿಳಿಸಲಾಗಿದೆ.