ಉಪ್ಪಳ: ಅವಿಭಜಿತ ಕನ್ನಡ ಭಾಷಾ ಅಲ್ಪಸಂಖ್ಯಾತ ಕಾಸರಗೋಡು ತಾಲೂಕಿನಿಂದ ವಿಭಜನೆಗೊಂಡ ಅಚ್ಚಕನ್ನಡ ಪ್ರದೇಶ ಮಂಜೇಶ್ವರ ತಾಲೂಕಿಗೆ ಅಲ್ಪಸಂಖ್ಯಾತ ಸ್ಥಾನಮಾನ ನೀಡಬೇಕೆಂಬ ಬೇಡಿಕೆಯನ್ನು ಮುಂದಿಟ್ಟು ಕನ್ನಡ ಹೋರಾಟ ಸಮಿತಿ ನೇತೃತ್ವದಲ್ಲಿ ಉಪ್ಪಳದಲ್ಲಿರುವ ಮಂಜೇಶ್ವರ ತಾಲೂಕು ಕಚೇರಿ ಮುಂಭಾಗದಲ್ಲಿ ಜ.16ರಂದು ನಡೆಯಲಿರುವ ಪ್ರತಿಭಟನಾ ಸತ್ಯಾಗ್ರಹವನ್ನು ಯಶಸ್ವಿಗೊಳಿಸಲು ಶುಕ್ರವಾರ ಉಪ್ಪಳದಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು.
ಜ.16ರಂದು ಬೆಳಗ್ಗೆ 10.30ಕ್ಕೆ ಕೈಕಂಬ ಜಂಕ್ಷನ್‍ನಿಂದ ಬೃಹತ್ ಮೆರವಣಿಗೆಯಲ್ಲಿ ಸಾಗಿ ತಾಲೂಕು ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಗುವುದು. ಪ್ರತಿಭಟನೆಯಲ್ಲಿ ಕನ್ನಡ ಭಾಷಾಭಿಮಾನಿಗಳು, ಉದ್ಯೋಗಾರ್ಥಿಗಳು, ಕನ್ನಡ ನೌಕರರು, ಕನ್ನಡ ಅಧ್ಯಾಪಕರು ಹಾಗೂ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು. ಕನ್ನಡ ಭಾಷಾ ಅಲ್ಪಸಂಖ್ಯಾತ ತಾಲೂಕು ಎಂಬ ಮಾನ್ಯತೆ ಸಿಗುವುದರ ಮೂಲಕ ಅಪಾರ ಸಂಖ್ಯೆಯಲ್ಲಿ ಕನ್ನಡಿಗರಿಗೆ ಉದ್ಯೋಗ ದೊರಕುವ ಅವಕಾಶವಿದ್ದು, ಅದರ ಮೇಲಿನ ಸವಾರಿಯನ್ನು ಸಭೆಯಲ್ಲಿ ಖಂಡಿಸಲಾಯಿತು.
ಕನ್ನಡ ಹೋರಾಟ ಸಮಿತಿ ಉಪಾಧ್ಯಕ್ಷ ಮಹಾಲಿಂಗೇಶ್ವರ ಭಟ್ ಎಂ.ವಿ., ಸಮಸ್ಯೆಯ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಭಾಸ್ಕರ ಕಾಸರಗೋಡು, ಟಿ.ಡಿ.ಸದಾಶಿವ ರಾವ್, ರವೀಂದ್ರ ಶೆಟ್ಟಿ, ದಿನೇಶ್ ಚೆರುಗೋಳಿ, ಎಂ.ಬಾಬು, ಜೋನ್ ಡಿ ಸೋಜ, ರಾಮ ಮತ್ತಿತರರು ಉಪಸ್ಥಿತರಿದ್ದರು.