ಕಾಸರಗೋಡು: ನೂತನ ವರ್ಷದಲ್ಲಿ ಜಿಲ್ಲೆಯ ಶಿಕ್ಷಣ ವಲಯಕ್ಕೆ ಪುನಶ್ಚೇತನಕ್ಕೆ ಜಿಲ್ಲಾಡಳಿತೆ ವತಿಯಿಂದ ವಿಶೇಷ ಶಿಕ್ಷಣ ಯೋಜನೆಯೊಂದು ಜಾರಿಗೆ ಬರಲಿದೆ. "ಜ್ಯೋತಿ-2020" ಎಂಬ ಹೆಸರಲ್ಲಿರುವ ಯೋಜನೆ ವಿವಿಧ ಇಲಾಖೆಗಳ ಸಹಕಾರದೊಂದಿಗೆ ರಚನೆಗೊಂಡಿದೆ. ರಾಜ್ಯ ಸರಕಾರದ ಸಾರ್ವಜನಿಕಶಿಕ್ಷಣ ಯಜ್ಞದ ಜೊತೆಗೆ ಜಿಲ್ಲೆಯ ವಿಶೇಷ ಹಿನ್ನೆಲೆ ಗಮನಿಸಿ ಶಿಕ್ಷಣ ವಲಯಕ್ಕೆ ಹೆಚ್ಚುವರಿ ಗಮನಹರಿಸುವ ನಿಟ್ಟಿನಲ್ಲಿ "ಜ್ಯೋತಿ-2020" ಯೋಜನೆ ಜಾರಿಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿರುವರು.
ಶಿಕ್ಷಣಾಲಯಗಳಲ್ಲಿ ಮೂಲಭೂತ ಸೌಲಭ್ಯಗಳು, ವಿದ್ಯಾರ್ಥಿಗಳ ಸುರಕ್ಷೆ, ಕಲಿಕೆಯ ಗುಣಮಟ್ಟ, ಸಹಿತ ಶಿಕ್ಷಣ ವಲಯದ ವಿವಿಧ ಮಜಲುಗಳ ಸಮಗ್ರ ಅಭಿವೃದ್ಧಿ ನಡೆಸುವ ನಿಟ್ಟಿನಲ್ಲಿ ಯೋಜನೆ ರಚನೆಗೊಂಡಿದೆ. ಪ್ರಾಥಮಿಕ ಶುಶ್ರೂಷೆ ಎಲ್ಲರಿಗೂ ಲಭಿಸುವ ನಿಟ್ಟಿನಲ್ಲಿ ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ, ತರಬೇತಿನೀಡಲಾಗುವುದು. ಶಾಲೆಯಲ್ಲಿ ಅಕ್ರಮ ರೂಪದಲ್ಲಿ ಯಾವುದೇ ಘಟನೆಗಳು ನಡೆದರೆ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಶಿಕ್ಷಣ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಗಣಿತ, ಭಾಷೆ ಸಹಿತ ವಿಷಯಗಳಲ್ಲಿ ಮೂಲ ಗ್ರಹಿಕೆ ಖಚಿತಪಡಿಸುವ ನಿಟ್ಟಿನಲ್ಲಿ ಮತ್ತು ಮುಂದಿನ ತರಗತಿಗೆ ಕೈಹಿಡಿದು ಕರೆದೊಯ್ಯುವ ಉದ್ದೇಶ ಇಲ್ಲಿದೆ.
ಶಾಲೆಗಳಲ್ಲೇ ಉಪಹಾರ ವ್ಯವಸ್ಥೆ!:
ವಿದ್ಯಾರ್ಥಿಗಳಿಗೆ ಬಿಡುವು ಮತ್ತು ಮಧ್ಯಾಹ್ನದ ಭೋಜನ ವೇಳೆ ಶಾಲಾ ವ್ಯಾಪ್ತಿ ಬಿಟ್ಟು ಹೊರಗಡೆ ತೆರಳದಂತೆ ಮಿತವಾದ ದರದಲ್ಲಿ ಕುಟುಂಬಶ್ರೀ ವತಿಯಿಂದ ಉಪಹಾರದ ವಿತರಣೆ ನಡೆಸಲಾಗುವುದು. ಉದಾಹರಣೆಗೆ ಕುಟುಂಬಶ್ರೀ ಸಫಲಂ ಯೋಜನೆ ಅಂಗವಾಗಿ 5 ರೂ.ಗೆ ಗೇರುಬೀಜದಿಂದ ತಯಾರಿಸಿದ ಸಿಹಿತಿಂಡಿ ಲಭಿಸಲಿದೆ. ದೋಸೆ ಸಹಿತ ಉಪಹಾರಗಳೂ ಈ ನಿಟ್ಟಿನಲ್ಲಿ ಲಭಿಸಲಿವೆ. ಗೃಹಿಣಿಯರ ಸಹಕಾರವನ್ನೂ ಈ ಬಗ್ಗೆ ಬಳಸಿಕೊಳ್ಳಲಾಗುವುದು.
ಸಹಕಾರಿ ಸೊಸೈಟಿ:
500ಕ್ಕೂ ಅಧಿಕ ಮಕ್ಕಳಿರುವ ಶಾಲೆಗಳಲ್ಲಿ ಸಹಕಾರಿ ಇಲಾಖೆಯ ಸಹಕಾರದಲ್ಲಿ ಸಹಕಾರಿ ಸೊಸೈಟಿ ಆರಂಭಿಸಲಾಗುವುದು. ಈ ಮೂಲಕ ವಿದ್ಯಾರ್ಥಿಗಳಿಗೆ ಮಿತದರದಲ್ಲಿಕಲಿಕೋಪಕರಣಗಳು ಲಭಿಸಲಿವೆ. ಈ ಸಂಬಂಧ ಜ.20ರಂದು ಚಟ್ಟಂಚಾಲ್ ಅರ್ಬನ್ ಬ್ಯಾಂಕ್ ಸಭಾಂಗಣದಲ್ಲಿ ಜಿಲ್ಲೆಯ ಶಾಲೆಗಳ ಮುಖ್ಯಶಿಕ್ಷಕರ ಸಭೆ ಜರುಗಲಿದೆ. ಶಾಲೆಗಳ ಗ್ರಂಥಾಲಯಗಳ ಸೌಲಭ್ಯ ಹೆಚ್ಚಿಸುವ ನಿಟ್ಟಿನಲ್ಲಿ ಸಹಕಾರಿ ಇಲಾಖೆ ತಲಾ 10 ರೂ. ಆರ್ಥಿಕ ಸಹಾಯ ನೀಡಲಿದೆ.
ಸುರಕ್ಷತೆಗೆ ಆದ್ಯತೆ:
ವಿದ್ಯಾಲಯಗಳಲ್ಲಿ ಸುರಕ್ಷಿತ ವಾತಾವರಣ ಖಚಿತಪಡಿಸುವಿಕೆಗೆ "ಜ್ಯೋತಿ-2020" ಯೋಜನೆ ಆದ್ಯತೆ ನೀಡಲಿದೆ. ಮೂಲಭೂತ ಸೌಲಭ್ಯಗಳ ವಿಚಾರಗಳನ್ನು ಎಲ್ಲ ಶಾಲೆಗಳಿಗೆ ಸಂಬಂಧಪಟ್ಟವರು ಜ.10ರ ಮುಂಚಿತವಾಗಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ತಿಳಿಸಿದರು.
ವಿದ್ಯಾಲಯಗಳ ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಟ್ಟಿನಲ್ಲಿ ಸಾಮಾಜಿಕ ಬದ್ಧತೆ ನಿಧಿ ಬಳಸಲಾಗುವುದು. ಈ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಸೌಲಭ್ಯ, ಬಾವಿಗಳನ್ನು ನಿರ್ಮಿಸಲಾಗುವುದು. ಬಳಸದೇ ಇರುವ ಕೊಳವೆಬಾವಿಗಳನ್ನುಬಳಸಲು ಯತ್ನಿಸಲಾಗುವುದು. ಶಾಲೆಗಳಲ್ಲಿ ವಿಶೇಷಚೇತನರ ಸ್ನೇಹಿ ವಾತಾವರಣನಿರ್ಮಿಸಲಾಗುವುದು. ಇದಕ್ಕಾಗಿ ಯಾರ್ಂಪ್ ನಿರ್ಮಿಸಲಾಗುವುದು.
ಸಭೆ:
ಜ್ಯೋತಿ-2020 ಯೋಜನೆ ಸಂಬಂಧ ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ಜರುಗಿತು. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಣ ನಿರ್ದೇಶಕಿ ಕೆ.ವಿ.ಪುಷ್ಪಾ, ಎಸ್.ಎಸ್.ಎ. ಜಿಲ್ಲಾ ಯೋಜನೆ ಪ್ರಬಂಧಕ ಎ.ಕೆ.ವಿಜಯಕುಮಾರ್, ಹೈಯರ್ ಸೆಕೆಂಡರಿ ರೀಜನಲ್ ಡೆಪ್ಯೂಟಿ ಡೈರೆಕ್ಟರ್ ಪಿ.ಎನ್.ಶಿವನ್,ಕಾಸರಗೋಡು ಶಿಕ್ಷಣಾಧಿಕಾರಿ ನಂದಿಕೇಶನ್, ಕಾಞಂಗಾಡ್ ಶಿಕ್ಷಣಾಧಿಕಾರಿ ಸರಸ್ವತಿ, ಜಿಲ್ಲಾ ವಾರ್ತಾಧಿಕಾರಿ ಮಧುಸೂದನನ್ ಎಂ., ಸಹಕಾರಿ ಸಂಘ ಜಾಯಿಂಟ್ ರೆಜಿಸ್ತ್ರಾರ್ ನೌಷಾದ್ ಅರೀಕೋಡ್, ಕುಟುಂಬಶ್ರೀ ಜಿಲ್ಲಾ ಸಂಚಾಲಕ ಟಿ.ಟಿ.ಸುರೇಂದ್ರನ್ ಮೊದಲಾದವರು ಉಪಸ್ಥಿತರಿದ್ದರು.