ಬದಿಯಡ್ಕ: ನಾನು ನನ್ನದು ನನ್ನಿಂದ ಎಂಬುದನ್ನು ಬಿಟ್ಟು ಎಲ್ಲವೂ ಭಗವಂತನ ಇಚ್ಛೆಯಂತೆ ನಡೆಯುತ್ತದೆ ಎಂಬ ವಿಶಾಲವಾದ ಮನೋಭಾವವನ್ನು ಹೊಂದಿದಾಗ ನಮ್ಮ ಜೀವನ ಸಾರ್ಥಕತೆಯನ್ನು ಕಾಣುತ್ತದೆ. ಶಬರಿಮಲೆ ವ್ರತಾನುಷ್ಠಾನ, ಆಚಾರಗಳಿಂದ ನಮ್ಮಲ್ಲಿ ಸಾತ್ವಿಕ ಚೈತನ್ಯ ಜಾಗೃತಿಯನ್ನುಂಟುಮಾಡುತ್ತದೆ ಎಂದು ತಂತ್ರಿವರ್ಯ ಬ್ರಹ್ಮಶ್ರೀ ಉಳಿಯ ವಿಷ್ಣು ಆಸ್ರ ಆಶೀರ್ವಚನವನ್ನು ನೀಡಿದರು.
ನೀರ್ಚಾಲು ಶ್ರೀ ಧರ್ಮಶಾಸ್ತಾ ಭಜನ ಮಂದಿರದ 40ನೇ ವಾರ್ಷಿಕೋತ್ಸವದ ಅಂಗವಾಗಿ ಭಾನುವಾರ ಸಂಜೆ ನಡೆದ ಧಾರ್ಮಿಕ ಸಭಾಕಾರ್ಯಕ್ರಮವನ್ನು ದೀಪಬೆಳಗಿಸಿ ಉದ್ಘಾಟಿಸಿ ಅವರು ಆಶೀರ್ವಚನವನ್ನು ನೀಡಿದರು.
ಶಬರಿಮಲೆ ಯಾತ್ರೆಯ ಮೂಲಕ ಜೀವನದಲ್ಲಿ ಸಾರ್ಥಕತೆಯನ್ನು ಕಾಣುವ ಮನುಷ್ಯ ಜೀವನವು ಪಾವನವಾದುದು. ಸ್ಥಳ ಸಾನ್ನಿಧ್ಯ ಶಕ್ತಿಗಳನ್ನು ನಿರಂತರ ಆರಾಧಿಸಿಕೊಂಡು ಬಂದರೆ ಎಲ್ಲ ಕಾರ್ಯಗಳು ನಿರ್ವಿಘ್ನವಾಗಿ ಸಾಗುತ್ತದೆ. ನೀರ್ಚಾಲಿನ ಈ ಅಯ್ಯಪ್ಪ ಸಾನ್ನಿಧ್ಯದ ಅಭಿವೃದ್ಧಿ ಕಾರ್ಯಗಳು ಅತಿಶೀಘ್ರದಲ್ಲಿ ನಡೆದು ಭವ್ಯವಾದ ಶ್ರದ್ಧಾಕೇಂದ್ರವಾಗಿ ಬೆಳಗಲಿ ಎಂದರು.
ಶ್ರೀ ಧರ್ಮಶಾಸ್ತಾ ಸೇವಾಸಮಿತಿಯ ಗೌರವಾಧ್ಯಕ್ಷ ಜಯದೇವ ಖಂಡಿಗೆ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಆಸ್ತಿಕ ಭಕ್ತಾದಿಗಳ ಶ್ರದ್ಧಾಕೇಂದ್ರವಾಗಿ ನೀರ್ಚಾಲಿನ ಬೆಳಕಾದ ಈ ಮಂದಿರದ ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯ ಎಂದು ಹೇಳಿದರು. ಶ್ರೀ ಧರ್ಮಶಾಸ್ತಾ ಸೇವಾಸಮಿತಿಯ ಅಧ್ಯಕ್ಷ ಬಾಲಕೃಷ್ಣ ನಾಯ್ಕ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶ್ರೀ ಮಂದಿರದ ಗುರುಸ್ವಾಮಿ ರಮೇಶ ಆಚಾರ್ಯ, ಶ್ರೀ ಕುಮಾರಸ್ವಾಮಿ ಭಜನ ಮಂದಿರದ ಗುರುಸ್ವಾಮಿ ಸುಬ್ರಹ್ಮಣ್ಯ ಆಚಾರ್ಯ, ಬದಿಯಡ್ಕ ಗ್ರಾಮಪಂಚಾಯಿತಿ ಸದಸ್ಯ ಶಂಕರ ಡಿ., ಶ್ರೀ ಧರ್ಮಶಾಸ್ತಾ ಮಿತ್ರಮಂಡಳಿಯ ಅಧ್ಯಕ್ಷ ರಾಜಗೋಪಾಲ ಓಣಿಯಡ್ಕ, ಶ್ರೀ ಧರ್ಮಶಾಸ್ತಾ ಮಾತೃಮಂಡಳಿಯ ಅಧ್ಯಕ್ಷೆ ಅರುಣಾ ಉದಯಕುಮಾರ್ ಮೈಕುರಿ ಉಪಸ್ಥಿತರಿದ್ದರು. ಶ್ರೀ ಧರ್ಮಶಾಸ್ತಾ ಸೇವಾಸಮಿತಿಯ ಕಾರ್ಯದರ್ಶಿ ಸೀತಾರಾಮ ಆಚಾರ್ಯ ಬೇಳ ಸ್ವಾಗತಿಸಿ, ಜೊತೆಕಾರ್ಯದರ್ಶಿ ಮಹೇಶ್ ನಾಯ್ಕ ಓಣಿಯಡ್ಕ ವಂದಿಸಿದರು. ಮಂಜುನಾಥ ಡಿ. ಮಾನ್ಯ ನಿರೂಪಿಸಿದರು. ಸ್ಥಳೀಯ ಮಕ್ಕಳು ಪ್ರಾರ್ಥನೆಯನ್ನು ಹಾಡಿದರು.